ಕಪಾಳಮೋಕ್ಷ ಘಟನೆ ಬಳಿಕ ಕಾರ್ಯಕ್ರಮದಿಂದ ಹೊರನಡೆಯುವಂತೆ ಸೂಚಿಸಿದ್ದರೂ ನಿರಾಕರಿಸಿದ್ದ ವಿಲ್‌ ಸ್ಮಿತ್

Update: 2022-03-31 08:04 GMT

ಲಾಸ್ ಏಂಜೆಲಿಸ್: ಭಾನುವಾರ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮ ನಿರೂಪಕ, ಕಾಮಿಡಿಯನ್ ಕ್ರಿಸ್ ರಾಕ್ ಅವರು ತಮ್ಮ ಪತ್ನಿಯ ಕೂದಲಿನ ಬಗ್ಗೆ ಅಪಹಾಸ್ಯ ಮಾಡಿದ್ದಾರೆಂಬ ಕಾರಣಕ್ಕೆ ಆಕ್ರೋಶಗೊಂಡು ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ಅವರು ಕ್ರಿಸ್ ಅವರಿಗೆ ಕಪಾಳಮೋಕ್ಷಗೈದ ಘಟನೆಯ ನಂತರ  ಅವರಿಗೆ ಹೊರನಡೆಯುವಂತೆ ಆಸ್ಕರ್ಸ್ ಸಮಿತಿ ಸೂಚಿಸಿತ್ತಾದರೂ ವಿಲ್ ಸ್ಮಿತ್  ಸಮಾರಂಭವನ್ನು ಬಿಟ್ಟು ಹೊರನಡೆಯಲು ಒಪ್ಪಿರಲಿಲ್ಲ ಎಂದು ತಿಳಿದು ಬಂದಿದೆ.

ತಮ್ಮ ಅನುಚಿತ ವರ್ತನೆಗಾಗಿ ಸ್ಮಿತ್ ಅವರು ಅಕಾಡೆಮಿಯಿಂದ ಉಚ್ಛಾಟನೆಗೈಯ್ಯಲ್ಪಡುವ ಶಿಕ್ಷೆಗೂ ಗುರಿಯಾಗಬಹುದಾಗಿದೆ. "ಸಮಾರಂಭದಿಂದ ಹೊರನಡೆಯುವಂತೆ ಸ್ಮಿತ್ ಅವರಿಗೆ ನಾವು ತಿಳಿಸಿದರೂ ಅವರು ನಿರಾಕರಿಸಿದರು ಹಾಗೂ ಅವರ ಆ ಸನ್ನಿವೇಶವನ್ನು ಬೇರೆ ರೀತಿಯಾಗಿ ನಿಭಾಯಿಸಬಹುದಾಗಿತ್ತು ಎಂಬುದೂ ನಮಗೆ ತಿಳಿದಿದೆ" ಎಂದು ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ಗೌರವಕ್ಕೆ ಧಕ್ಕೆ ತಂದ ಈ ಘಟನೆಯ ಕುರಿತಂತೆ ಸ್ಮಿತ್ ಅವರ ವಿರುದ್ಧ ಯಾವ ಕ್ರಮಕೈಗೊಳ್ಳಬೇಕೆಂಬ ಕುರಿತು ಮತದಾನ  ನಡೆಸುವುದಾಗಿಯೂ ಅಕಾಡೆಮಿ ಹೇಳಿದೆ.

"ಸ್ಮಿತ್ ಅವರಿಗೆ ತಮ್ಮ ಪ್ರತಿಕ್ರಿಯೆ  ನೀಡಲು ಕನಿಷ್ಠ 15 ದಿನಗಳ ನೋಟಿಸ್ ನೀಡಲಾಗುತ್ತಿದೆ. ಮುಂದಿನ ಅಕಾಡೆಮಿ ಸಭೆ ಎಪ್ರಿಲ್ 18ರಂದು ನಡೆಯಲಿರುವಾಗ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು, ಅದು ಉಚ್ಛಾಟನೆ ಅಥವಾ ನಿಯಮಾನುಸಾರ ಇತರ ನಿರ್ಬಂಧಗಳಿರಬಹುದು" ಎಂದು ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News