ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಆರೋಪಿ ದೋಷಮುಕ್ತವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಸರಕಾರ, ಸಂತ್ರಸ್ತೆ
ತಿರುವನಂತಪುರಂ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇರಳ ಸರಕಾರ ಬುಧವಾರ ಹೈಕೋರ್ಟಿನ ಮೊರೆ ಹೋಗಿದೆ. ಈ ಪ್ರಕರಣದ ಸಂತ್ರಸ್ತೆಯಾಗಿರುವ ಕ್ರೈಸ್ತ ಸನ್ಯಾಸಿನಿ ಕೂಡ ಹೈಕೋರ್ಟ್ ಕದ ತಟ್ಟಿದ್ದಾರೆ.
ತನ್ನ ಮೇಲೆ ಮುಲಕ್ಕಲ್ ಅವರು 2014 ಹಾಗೂ 2016 ನಡುವೆ ಅವರು ಜಲಂಧರ್ ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ವೇಳೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಕ್ರೈಸ್ತ ಸನ್ಯಾಸಿನಿ ಜೂನ್ 2018ಲ್ಲಿ ದೂರು ದಾಖಲಿಸಿದ್ದರು.
ಆದರೆ ಕ್ರೈಸ್ತ ಸನ್ಯಾಸಿನಿಯ ವಿರುದ್ಧದ ದೂರಿನ ಆಧಾರದಲ್ಲಿ ತಾನು ತನಿಖೆಗೆ ಆದೇಶಿಸಿದ್ದಕ್ಕೆ ಪ್ರತೀಕಾರವಾಗಿ ತನ್ನ ಮೇಲೆ ಅತ್ಯಾಚಾರ ಆರೋಪ ಹೊರಿಸಲಾಗಿದೆ ಎಂದು ಮುಲಕ್ಕಲ್ ಆರೋಪಿಸಿದ್ದರು. ಅತ್ಯಾಚಾರ ಆರೋಪ ಕೇಳಿ ಬಂದ ನಂತರ ಮುಲಕ್ಕಲ್ ಅವರನ್ನು ಬಿಷಪ್ ಹುದ್ದೆಯಿಂದ ಕೈಬಿಡಲಾಗಿತ್ತು.
ಜನವರಿ 14ರಂದು ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮುಲಕ್ಕಲ್ ಅವರನ್ನು ದೋಷಮುಕ್ತಗೊಳಿಸಿತ್ತು. ಸಂತ್ರಸ್ತೆಯ ಹೇಳಿಕೆ ವೈರುಧ್ಯಗಳಿಂದ ಕೂಡಿತ್ತು ಎಂದು ಹೇಳಿದ್ದ ನ್ಯಾಯಾಲಯ ಆಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿತ್ತಲ್ಲದೆ ಆಕೆಯನ್ನು 13 ಬಾರಿ ಅತ್ಯಾಚಾರಗೈಯ್ಯಲಾಗಿದೆ ಎಂಬ ಆಕೆಯ ಹೇಳಿಕೆಯನ್ನು ಆಕೆಯ ಏಕೈಕ ಸಾಕ್ಷ್ಯದ ಆದಾರದಲ್ಲಿ ಅವಲಂಬಿಸಲು ಸಾಧ್ಯವಿಲ್ಲ ಎಂದೂ ಹೇಳಿತ್ತು.
ನ್ಯಾಯಾಧೀಶರು ವಾಸ್ತವಗಳನ್ನು ತಪ್ಪಾಗಿ ಅರ್ಥೈಸಿ ಅಗತ್ಯವಿಲ್ಲದೆ ಆರೋಪಿಯನ್ನು ದೋಷಮುಕ್ತಗೊಳಿಸಿದ್ದಾರೆ ಎಂದು ಕೇರಳ ಸರಕಾರದ ಪರ ಸಲ್ಲಿಸಲಾದ ಮೇಲ್ಮನವಿ ಅರ್ಜಿಯಲ್ಲಿ ವಿವರಿಸಲಾಗಿದೆ.