ಅಪಘಾತ ಪ್ರಕರಣದಲ್ಲಿ ಪಾದಚಾರಿ ಮೃತ: ಆರೋಪಿಗೆ ಶಿಕ್ಷೆ
ಮಂಗಳೂರು : ನೀರುಮಾರ್ಗದಲ್ಲಿ ಬಸ್ ಢಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಪ್ರಕರಣ ೭ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 1ವರ್ಷ 6ತಿಂಗಳ ಸಜೆ ವಿಧಿಸಿದೆ.
ಧನರಾಜ್ ಶಿಕ್ಷೆಗೊಳಗಾದ ಅಪರಾಧಿ.
೨೦೧೯ರ ಮಾ.೨೭ರಂದು ಸಂಜೆ ೪.೩೦ಕ್ಕೆ ನೀರುಮಾರ್ಗ ಬ್ಯಾಂಕ್ ಎಟಿಎಂ ಬಳಿ ರೋಶನಿ ಟ್ರಾವೆಲ್ಸ್ ಬಸ್ ಪಾದಚಾರಿ ಮಾಧವ ಮೊಯಿಲಿ ಎಂಬವರಿಗೆ ಡಿಕ್ಕಿಯಾಗಿತ್ತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮಾ.೨೯ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಹಾಯಕ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಭಾಗಶಃ ತನಿಖೆ ಮುಗಿಸಿದ್ದರು. ಪೊಲೀಸ್ ನಿರೀಕ್ಷಕ ಕೃಷ್ಣಾನಂದ ಜಿ. ನಾಯಕ್ ಹೆಚ್ಚಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
೭ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಪದ್ಮ ಎಂ. ಅವರು ಪ್ರಕರಣ ಸಮಗ್ರ ವಿಚಾರಣೆ ನಡೆಸಿ ಧನರಾಜ್ ತಪ್ಪಿತಸ್ಥರೆಂದು ನಿರ್ಣಯಿಸಿದ್ದಾರೆ. ಅಪರಾಧಿಗೆ ೧ಸಾವಿರ ರೂ. ದಂಡ ಅಥವಾ ತಪ್ಪಿದಲ್ಲಿ ೧೫ದಿನಗಳ ಸಾದಾ ಕಾರಾಗೃಹ ವಾಸ ಹಾಗೂ ಐಪಿಸಿ ೩೦೪ರಡಿ ೧ವರ್ಷ ೬ತಿಂಗಳು ಸಾಮಾನ್ಯ ಸಜೆ ಜತೆಗೆ ೫ಸಾವಿರ ರೂ. ದಂಡ, ತಪ್ಪಿದಲ್ಲಿ ೧ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.
ಪ್ರಭಾರ ಹಿರಿಯ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದವನ್ನು ಮಂಡಿಸಿದ್ದರು.