ಹಿಜಾಬ್‌ಧಾರಿ ಬಾಲಕಿಯ ಚಿತ್ರವಿದ್ದ ವೀಡಿಯೊವನ್ನು ಡಿಲೀಟ್‌ ಮಾಡಿ ಹೊಸ ವೀಡಿಯೊ ಟ್ವೀಟ್‌ ಮಾಡಿದ ಕೇಂದ್ರ ಶಿಕ್ಷಣ ಇಲಾಖೆ

Update: 2022-03-31 14:16 GMT

ಹೊಸದಿಲ್ಲಿ: ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಕುರಿತಾದಂತೆ ವೀಡಿಯೊವೊಂದನ್ನು ಕೇಂದ್ರ ಶಿಕ್ಷಣ ಇಲಾಖೆಯು ಟ್ವೀಟ್‌ ಮಾಡಿದ್ದು, ಈ ವೀಡಿಯೋದ ಸಣ್ಣ ತುಣುಕಿನಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯ ಚಿತ್ರವಿದ್ದ ಕಾರಣಕ್ಕೆ ವೀಡಿಯೋವನ್ನು ಅಳಿಸಿ ಹಾಕಲಾಗಿದೆ ಎಂದು ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಟ್ವೀಟ್‌ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. 

ಎಪ್ರಿಲ್‌ ಒಂದರನ್ನು ದಿಲ್ಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಆರಂಭದಲ್ಲಿ ಶಿಕ್ಷಣ ಇಲಾಖೆಯು ಹಿಜಾಬ್‌ಧಾರಿ ಬಾಲಕಿಯಿರುವ ಚಿತ್ರವನ್ನೊಳಗೊಂಡ ವೀಡಿಯೊವನ್ನು ಟ್ವೀಟ್‌ ಮಾಡಿತ್ತು. ಬಳಿಕ ಅದನ್ನು ಡಿಲೀಟ್‌ ಮಾಡಿ ಬೇರೆಯೇ ಚಿತ್ರಗಳನ್ನು ಅಳವಡಿಸಿ ವೀಡಿಯೊ ಟ್ವೀಟ್‌ ಮಾಡಲಾಗಿದೆ. 

ಈ ಬಗ್ಗೆ ಡಿಲೀಟ್‌ ಮಾಡುವ ಮುಂಚಿನ ಸ್ಕ್ರೀನ್‌ ಶಾಟ್‌ ಅನ್ನು ಟ್ವೀಟ್ ಮಾಡಿದ ರವಿ ನಾಯರ್‌ ಎಂಬ ಟ್ವಿಟರ್‌ ಬಳಕೆದಾರರು, "ಮುಸ್ಲಿಂ ಬಾಲಕಿಯೊಬ್ಬಳು ಹಿಜಾಬ್‌ ಧರಿಸಿರುವ ಚಿತ್ರ ಇರುವುದರಿಂದ ಇದನ್ನು ತೆಗೆದುಹಾಕಲಾಗಿದೆಯೇ?" ಎಂದು ಪ್ರಶ್ನಿಸಿದ್ದಾರೆ. “ಕೇಂದ್ರ ಶಿಕ್ಷಣ ಸಚಿವಾಲಯ ಈ ಟ್ವೀಟ್ ಅನ್ನು ಏಕೆ ಅಳಿಸಿದೆ? ಅವರು ಹಿಜಾಬ್ ಹೊಂದಿರುವ ಮುಸ್ಲಿಂ ಹುಡುಗಿಯ ಚಿತ್ರವನ್ನು ಪೋಸ್ಟ್ ಮಾಡಿದ ಕಾರಣವೇ?" ಎಂದು ಅವರು ಪ್ರಶ್ನಿಸಿದ್ದಾರೆ. ಸಾಮಾಜಿಕ ತಾಣದಾದ್ಯಂತ ಹಲವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News