ಪುಟಿನ್ ಅವರ ಯುದ್ದೋತ್ಸಾಹಕ್ಕೆ ಬೆಂಬಲ ಬೇಡ: ರಶ್ಯ ವಿದೇಶ ಸಚಿವರ ಭಾರತ ಭೇಟಿಗೆ ಅಮೆರಿಕ ಟೀಕೆ

Update: 2022-03-31 17:12 GMT

Photo: Twitter/@EmbassyofRussia

ವಾಷಿಂಗ್ಟನ್, ಮಾ.31: ರಶ್ಯದ ಜತೆ ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸುವ ಭಾರತದ ಕ್ರಮ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಅಮೆರಿಕ ಮತ್ತು ಆಸ್ಟ್ರೇಲಿಯಾ ಟೀಕಿಸಿದೆ.  

ಇತಿಹಾಸದ ಕ್ರಮಬದ್ಧ ದಾರಿಯಲ್ಲಿ ನಿಲ್ಲುವ ಸಮಯ ಇದಾಗಿದೆ. ಅಮೆರಿಕ ಸೇರಿದಂತೆ ಇತರ ಹಲವಾರು ದೇಶಗಳೊಂದಿಗೆ ನಿಂತು ಉಕ್ರೇನ್ ಜನತೆಯ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ಹಕ್ಕಿನ ಹೋರಾಟವನ್ನು ಬೆಂಬಲಿಸುವ ಸಮಯವಾಗಿದೆ. ರಶ್ಯ ಅಧ್ಯಕ್ಷ ಪುಟಿನ್ ಅವರ ಯುದ್ಧವನ್ನು ಬೆಂಬಲಿಸುವ ಮತ್ತು ಅದಕ್ಕೆ ಆರ್ಥಿಕ ಶಕ್ತಿ ತುಂಬುವ ಸಮಯ ಇದಲ್ಲ ಎಂದು ವಾಷಿಂಗ್ಟನ್ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಹೇಳಿದರು. ರಶ್ಯದ ವಿದೇಶ ಸಚಿವ ಸೆರ್ಗೈ ಲಾವ್ರೋವ್ ಅವರ ಭಾರತ ಭೇಟಿಯಿಂದ ಅತ್ಯಂತ ನಿರಾಶೆಯಾಗಿದೆ. ಸಭೆಯ ಬಗ್ಗೆ ಹೆಚ್ಚಿನ ವಿವರ ಲಭಿಸಿಲ್ಲ ಎಂದು ಅವರು ಹೇಳಿದ್ದಾರೆ.

ರಶ್ಯ-ಭಾರತ ಮಾತುಕತೆಯನ್ನು ಟೀಕಿಸಿರುವ ಆಸ್ಟ್ರೇಲಿಯಾದ ವಾಣಿಜ್ಯ ಸಚಿವ ಡ್ಯಾನ್ ಟೆಹಾನ್, ಎರಡನೆಯ ಮಹಾಯುದ್ಧದ ಬಳಿಕ ನಾವು ರೂಪಿಸಿರುವ ನಿಯಮ ಆಧಾರಿತ ವಿಧಾನವನ್ನು ಮುಂದುವರಿಸಿಕೊಂಡು ಹೋಗಲು ಪ್ರಜಾಪ್ರಭುತ್ವಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದಿದ್ದಾರೆ. ಏಶ್ಯಾ ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಕ್ವಾಡ್ ಒಕ್ಕೂಟದ ಸದಸ್ಯನಾಗಿರುವ ಭಾರತವು ರಶ್ಯದ ಅತ್ಯಧಿಕ ಶಸ್ತ್ರಾಸ್ತ್ರ ಖರೀದಿಸುವ ದೇಶವಾಗಿದೆ ಮತ್ತು ಈಗ ರಶ್ಯವು ಡಿಸ್ಕೌಂಟ್ ದರದಲ್ಲಿ ಒದಗಿಸುವ ತೈಲವನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಭಾರತದ ಈ ನಿರ್ಧಾರವನ್ನು ಕ್ವಾಡ್ ಒಕ್ಕೂಟದ ಇತರ ಸದಸ್ಯರಾದ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ವಿರೋಧಿಸಿದೆ.

ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ವಿಶ್ವಸಂಸ್ಥೆಯಲ್ಲಿ ಖಂಡಿಸುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ. ಈ ಮಧ್ಯೆ, ‘ಸ್ವಿಫ್ಟ್’ ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ರೂಪಾಯಿ-ರೂಬಲ್(ರಶ್ಯದ ಕರೆನ್ಸಿ) ಪ್ರಾಬಲ್ಯದ ಪಾವತಿ ವ್ಯವಸ್ಥೆಯನ್ನು ರೂಪಿಸುವ ರಶ್ಯದ ಯೋಜನೆಯನ್ನು ಭಾರತ ಪರಿಶೀಲಿಸುತ್ತಿದೆ ಎಂದು ಬ್ಲೂಮ್ಬರ್ಗ್ ಬುಧವಾರ ವರದಿ ಮಾಡಿದೆ. ರಶ್ಯದ ಆನ್‌ಲೈನ್ ವೇದಿಕೆ ‘ಎಸ್‌ಪಿಎಫ್‌ಎಸ್’ ಮತ್ತು ಸೆಂಟ್ರಲ್ ಬ್ಯಾಂಕ್ ಮೂಲಕ ನಿರ್ವಹಿಸಲ್ಪಡುವ ಈ ಪರ್ಯಾಯ ಪಾವತಿ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಮುಂದಿನ ವಾರ ರಶ್ಯದ ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಉಕ್ರೇನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದ ವಿಷಯದಲ್ಲಿ ಭಾರತ ತಟಸ್ಥ ನಿಲುವು ತಳೆದಿರುವುದರಿಂದ ಕಳೆದ ಕೆಲ ವಾರದಲ್ಲಿ ಭಾರತದಲ್ಲಿ ಬಿರುಸಿನ ರಾಜತಾಂತ್ರಿಕ ಚಟುವಟಿಕೆಗಳು ನಡೆದಿವೆ. 2019ರ ಬಳಿಕ ಇದೇ ಮೊದಲ ಬಾರಿ ಚೀನಾದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದರೆ, ರಶ್ಯದ ವಿದೇಶ ಸಚಿವರ ಭಾರತ ಭೇಟಿ ಕಾರ್ಯಕ್ರಮವೂ ನಿಗದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಜಪಾನ್‌ನ ಪ್ರಧಾನಿ ಫುಮಿಯೊ ಕಿಷಿಡಾ ಭಾರತಕ್ಕೆ ಆಗಮಿಸಿದ್ದರೆ, ಮುಂದಿನ ದಿನದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತದ ಪ್ರಧಾನಿ ಮೋದಿ ಜತೆ ವೀಡಿಯೊ ಸಂವಾದ ನಡೆಸಿದ್ದರು. ಬುಧವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಎಂದು ವರದಿಯಾಗಿದೆ.

 ಲಾವ್ರೋವ್ ಅವರ ಭೇಟಿ ಸಂದರ್ಭದಲ್ಲೇ ಭಾರತವು ಅಮೆರಿಕದ ಅಂತರಾಷ್ಟ್ರೀಯ ಆರ್ಥಿಕತೆಗೆ ಸಂಬಂಧಿಸಿದ ಸಹಾಯಕ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಹಾಗೂ ಬ್ರಿಟನ್‌ನ ವಿದೇಶಾಂಗ ಸಚಿವೆ ಲಿರ್ ಟ್ರುಸ್ ಅವರು ಪಾಲ್ಗೊಳ್ಳುವ ಸಭೆಯನ್ನೂ ಆಯೋಜಿಸಿದೆ. ಚೀನಾದಿಂದ ಗಡಿಭಾಗದಲ್ಲಿ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ರಶ್ಯದಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಭಾರತ ಪ್ರತಿಪಾದಿಸುತ್ತಿದೆ.

ರಶ್ಯದಿಂದ ತೈಲ ಆಮದನ್ನು ಹೆಚ್ಚಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯದ ಮೇಲಿನ ನಿರ್ಬಂಧವನ್ನು ಇನ್ನಷ್ಟು ತೀವ್ರಗೊಳಿಸಲು ಅಮೆರಿಕ ನಿರ್ಧರಿಸುವುದರಿಂದ ರಶ್ಯದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುವ ಭಾರತದ ನಿಲುವು ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಡಬಹುದು ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಎಚ್ಚರಿಸಿದ್ದಾರೆ.

ರಶ್ಯ ಡಿಸ್ಕೌಂಟ್ ದರದಲ್ಲಿ ಒದಗಿಸುವ ತೈಲವನ್ನು ಭಾರತ ಖರೀದಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಖರೀದಿ ಹೆಚ್ಚಿಸುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮೂಲಗಳು ವರದಿ ಮಾಡಿವೆ. ತೈಲ ಖರೀದಿಯ ವಿಷಯದಲ್ಲಿ ಭಾರತ-ರಶ್ಯ ನಡುವೆ ನಡೆದ ಮಾತುಕತೆಯ ಮಾಹಿತಿ ನಮಗಿದೆ. ಆದರೆ ಉಕ್ರೇನ್ ವಿರುದ್ಧ ರಶ್ಯ ನಡೆಸಿದ ಏಕಪಕ್ಷೀಯ ವಿನಾಶಕಾರಿ ಆಕ್ರಮಣ ಕೊನೆಗೊಳ್ಳಬೇಕಿದ್ದರೆ ಸಶಕ್ತ ಸಂಘಟಿತ ಪ್ರಯತ್ನದ ಅಗತ್ಯವನ್ನು ಭಾರತ ಸಹಿತ ವಿಶ್ವದಾದ್ಯಂತದ ನಮ್ಮ ಮಿತ್ರರಿಗೆ ರವಾನಿಸುವ ಕಾರ್ಯ ಮುಂದುವರಿಸಲಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

  ಅವರು (ಭಾರತ) ಮಾಡುವ ಖರೀದಿ, ಪಾವತಿ ಪ್ರಕ್ರಿಯೆ ನಿರ್ಬಂಧ ಕ್ರಮದ ಅನುಸಾರವಾಗಿರಬೇಕು. ಇಲ್ಲದಿದ್ದರೆ ಅವರು ದೊಡ್ಡ ಅಪಾಯಕ್ಕೆ ಸಿಲುಕಬಹುದು. ಖರೀದಿಗೆ ಪಾವತಿಯನ್ನು ರೂಪಾಯಿಯಲ್ಲಿ ಮಾಡಲಿ, ಅಥವಾ ಡಾಲರ್ನಲ್ಲಿ ಮಾಡಲಿ, ಅದು ಅವರಿಗೆ ಬಿಟ್ಟ ವಿಷಯ. ನಿರ್ಬಂಧದ ಸೂತ್ರಕ್ಕೆ ಬದ್ಧವಾಗಿದ್ದರೆ ಮತ್ತು ಆಮದನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸದಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದವರು ಹೇಳಿದ್ದಾರೆ.

ಈಗ ರಶ್ಯದ ಮೇಲೆ ವಿಧಿಸಿರುವ ನಿರ್ಬಂಧವು, ಇತರ ದೇಶಗಳು ರಶ್ಯದಿಂದ ತೈಲ ಖರೀದಿಸುವುದನ್ನು ನಿರ್ಬಂಧಿಸುವುದಿಲ್ಲ. ಆದರೆ ಇದೀಗ, ಇತರ ದೇಶಗಳು ತೈಲ ಖರೀದಿಸುವುದನ್ನೂ ನಿರ್ಬಂಧಿಸಲು ಅಮೆರಿಕ ಬಯಸಿದೆ ಎಂದು ವರದಿಯಾಗಿದೆ. ವಿಶ್ವದ ಮೂರನೇ ಅತೀ ದೊಡ್ಡ ತೈಲ ಆಮದುಗಾರ ಮತ್ತು ಬಳಕೆದಾರ ದೇಶವಾದ ಭಾರತ, ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭವಾದ ಬಳಿಕ ರಶ್ಯ ಪ್ರಸ್ತಾಪಿಸಿರುವ ಡಿಸ್ಕೌಂಟ್ ದರದ ತೈಲ ಖರೀದಿಗೆ ನಿರ್ಧರಿಸಿದೆ. ಫೆ.24ರಿಂದ ಭಾರತ ಕನಿಷ್ಟ 13 ಮಿಲಿಯನ್ ಬ್ಯಾರಲ್ ತೈಲವನ್ನು ರಶ್ಯದಿಂದ ಆಮದು ಮಾಡಿಕೊಂಡಿದ್ದರೆ, 2021ರ ವರ್ಷದಲ್ಲಿ ರಶ್ಯದಿಂದ ಆಮದು ಮಾಡಿಕೊಂಡಿದ್ದ ತೈಲದ ಪ್ರಮಾಣ ಸುಮಾರು 16 ಮಿಲಿಯನ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News