×
Ad

ಮುಯ್ಯಿಗೆ ಮುಯ್ಯಿ: ಅಮೆರಿಕದ ಅಧಿಕಾರಿಗಳ ವೀಸ ನಿರ್ಬಂಧಿಸಿದ ಚೀನಾ

Update: 2022-03-31 22:54 IST

ಬೀಜಿಂಗ್, ಮಾ.31: ಚೀನಾದ ಕೆಲವು ಅಧಿಕಾರಿಗಳಿಗೆ ಅಮೆರಿಕ ವೀಸ ನಿರ್ಬಂಧ ವಿಧಿಸಿರುವುದಕ್ಕೆ ಪ್ರತಿಯಾಗಿ, ಅಮೆರಿಕದ ಕೆಲವು ಅಧಿಕಾರಿಗಳ ವೀಸವನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಗುರುವಾರ ಹೇಳಿದ್ದಾರೆ.

ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದಮನಕಾರಿ ಕೃತ್ಯಗಳಲ್ಲಿ ಶಾಮೀಲಾಗಿರುವ ಚೀನಾದ ಕೆಲವು ಅಧಿಕಾರಿಗಳ ವೀಸವನ್ನು ನಿಬರ್ಂಧಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಇತ್ತೀಚೆಗೆ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಚೀನಾವನ್ನು ಒಳಗೊಂಡಿರುವ ಮಾನವ ಹಕ್ಕುಗಳ ವಿಷಯದಲ್ಲಿ ಸುಳ್ಳನ್ನು ಹೆಣೆದ, ಚೀನಾದ ಮೇಲೆ ನಿರ್ಬಂಧಗಳನ್ನು ಉತ್ತೇಜಿಸಿದ ಮತ್ತು ಜಾರಿಗೊಳಿಸಿದ ಹಾಗೂ ಚೀನಾದ ಹಕ್ಕು ಹಾಗೂ ಹಿತಾಸಕ್ತಿಗೆ ಹಾನಿ ಎಸಗಿದ ಅಮೆರಿಕದ ಕೆಲವು ಅಧಿಕಾರಿಗಳ ವೀಸಾವನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ದುರುದ್ದೇಶಪೂರಿತ ಸುಳ್ಳುಗಳನ್ನು ನಿರೂಪಿಸಲು ಅಮೆರಿಕ ಮಾನವ ಹಕ್ಕುಗಳ ನೆಪವನ್ನು ಬಳಸುತ್ತಿದೆ ಮತ್ತು ಚೀನಾದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಲು, ಚೀನಾದ ಪ್ರತಿಷ್ಟೆಗೆ ಮಸಿ ಬಳಿಯಲು ಮತ್ತು ಚೀನಾದ ಅಧಿಕಾರಿಗಳನ್ನು ನಿಗ್ರಹಿಸಲು ಇದನ್ನು ಒಂದು ಕಾರಣವಾಗಿ ಬಳಸುತ್ತಿದೆ ಎಂದವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News