ಶ್ರೀಲಂಕಾದಲ್ಲಿ ಡೀಸೆಲ್ ದಾಸ್ತಾನು ಖಾಲಿ, ಪೆಟ್ರೋಲ್ ಕೂಡಾ ತುಟ್ಟಿ; ಸಾರಿಗೆ ವ್ಯವಸ್ಥೆ ಮೊಟಕು

Update: 2022-04-01 02:19 GMT

ಕೊಲಂಬೊ, ಮಾ.31: ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ, ದಿನಕ್ಕೆ 13 ಗಂಟೆ ವಿದ್ಯುತ್ ಕಡಿತ, ಅಗತ್ಯವಸ್ತುಗಳ ತೀವ್ರ ಕೊರತೆ ಮುಂತಾದ ಸರಣಿ ಸಮಸ್ಯೆಗಳಿಂದ ಕಂಗೆಟ್ಟಿದ್ದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಗುರುವಾರ ಡೀಸೆಲ್ ದಾಸ್ತಾನು ಖಾಲಿಯಾಗಿದ್ದು ದೇಶದೆಲ್ಲೆಡೆ ಸಾರಿಗೆ ವ್ಯವಸ್ಥೆ ಮೊಟಕುಗೊಂಡಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ಗುರುವಾರದಿಂದ ವಿದ್ಯುತ್ ಕಡಿತವನ್ನು ದಿನಕ್ಕೆ 13 ಗಂಟೆಗೆ ವಿಸ್ತರಿಸಲು ನಿರ್ಧರಿಸಿರುವುದಾಗಿ ಸರಕಾರಿ ಸ್ವಾಮ್ಯದ ವಿದ್ಯುತ್ ಪೂರೈಕೆ ಸಂಸ್ಥೆ ಘೋಷಿಸಿದೆ. ವಿದ್ಯುತ್ ಉತ್ಪಾದಿಸುವ ಜನರೇಟರ್ಗಳಿಗೆ ಡೀಸೆಲ್ ಲಭಿಸುತ್ತಿಲ್ಲ. ಜಲವಿದ್ಯುತ್ ಸ್ಥಾವರಗಳೂ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಿಲೋನ್ ವಿದ್ಯುತ್ ನಿಗಮದ ಅಧ್ಯಕ್ಷ ಎಂ.ಸಿ. ಫರ್ಡಿನಾಂಡೊ ಹೇಳಿದ್ದಾರೆ. ದೀರ್ಘಾವಧಿ ವಿದ್ಯುತ್ ಕಡಿತದಿಂದಾಗಿ ಕೊಲಂಬೊ ಸ್ಟಾಕ್ ಎಕ್ಸ್‌ಚೇಂಜ್‌ ನ ವ್ಯವಹಾರದ ಅವಧಿಯನ್ನು 2 ಗಂಟೆಗೆ ಸೀಮಿತಗೊಳಿಸಲಾಗಿದೆ.

  ವಿದೇಶದಿಂದ ಡೀಸೆಲ್ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಅಡ್ಡಿಯಾಗಿದೆ. ಬಹುತೇಕ ಸಾರಿಗೆ ವಾಹನಗಳು ಡೀಸೆಲ್ ಬಳಸುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಮೊಟಕುಗೊಂಡಿದೆ. ಈಗ ಗ್ಯಾರೇಜ್‌ನಲ್ಲಿ ದುರಸ್ತಿಗೆ ನಿಂತಿರುವ ವಾಹನಗಳಿಂದ ಡೀಸೆಲ್ ಹೊರತೆಗೆದು ಸಾರಿಗೆ ವ್ಯವಸ್ಥೆಗೆ ಬಳಸಲಾಗುತ್ತಿದೆ ಎಂದು ಸಾರಿಗೆ ಸಚಿವ ದಿಲುಮ್ ಅಮುನುಗಮ ಹೇಳಿದ್ದಾರೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಸಾರಿಗೆ ಮೂರನೇ ಎರಡಷ್ಟು ಪಾಲು ಹೊಂದಿದೆ. ನಮ್ಮ ಡೀಸೆಲ್ ದಾಸ್ತಾನು ಇವತ್ತು(ಗುರುವಾರ) ಮುಗಿಯಲಿದೆ. ಡೀಸೆಲ್ ಲಭ್ಯವಾಗದಿದ್ದರೆ ಶುಕ್ರವಾರದ ಬಳಿಕ ಬಸ್ಸುಗಳನ್ನು ಓಡಿಸಲು ಸಾಧ್ಯವಾಗದು ಎಂದು ಖಾಸಗಿ ಬಸ್ಸುಗಳ ಮಾಲಕರು ಹೇಳಿದ್ದಾರೆ.

  ಈ ಮಧ್ಯೆ ಪೆಟ್ರೋಲ್ ದರ ಗುರುವಾರ ಮತ್ತಷ್ಟು ಏರಿಕೆಯಾಗಿದ್ದು ಜತೆಗೆ ಕೊರತೆಯೂ ಹೆಚ್ಚಿರುವುದರಿಂದ ಬಹುತೇಕ ಪೆಟ್ರೋಲ್ ಪಂಪ್ಗಳ ಎದುರು ವಾಹನಗಳ ಸಾಲು ಬೆಳೆದಿದೆ. ಸುಮಾರು 51 ಬಿಲಿಯನ್ ಡಾಲರ್ ಅಂತರಾಷ್ಟ್ರೀಯ ಸಾಲ ಪಾವತಿಗೆ ಬಾಕಿಯಾದ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ದಾಸ್ತಾನನ್ನು ಹೆಚ್ಚಿಸುವ ಉದ್ದೇಶದಿಂದ ಶ್ರೀಲಂಕಾ 2020ರ ಮಾರ್ಚ್‌ನಲ್ಲಿ ಆಮದು ಪ್ರಕ್ರಿಯೆಗೆ ನಿಷೇಧ ವಿಧಿಸಿತ್ತು. ಆದರೆ ಈ ಕ್ರಮ ತಿರುಗುಬಾಣವಾಗಿ ಪರಿಣಮಿಸಿ, ದೇಶದೆಲ್ಲೆಡೆ ಅಗತ್ಯ ವಸ್ತುಗಳ ತೀವ್ರ ಕೊರತೆಯ ಸಮಸ್ಯೆ ಬಿಗಡಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News