ಪತನದ ಅಂಚಿಗೆ ತಲುಪಿದ ಅಫ್ಗಾನ್ ನ ಅರ್ಥವ್ಯವಸ್ಥೆ: ವಿಶ್ವಸಂಸ್ಥೆ ಆತಂಕ

Update: 2022-03-31 18:07 GMT

  ಕಾಬೂಲ್, ಮಾ.31: ಸಂಘರ್ಷದಿಂದ ಜರ್ಝರಿತಗೊಂಡ ಅಫ್ಗಾನಿಸ್ತಾನಕ್ಕೆ ತಕ್ಷಣ ಮಾನವೀಯ ನೆರವು ಒದಗಿಸಲು ದಾಖಲೆಯ 4.4 ಬಿಲಿಯನ್ ಡಾಲರ್ ಮೊತ್ತದ ಅಗತ್ಯವಿದೆ. ಅಫ್ಗಾನಿಸ್ತಾನದ ಅರ್ಥವ್ಯವಸ್ಥೆ ಪತನದ ಅಂಚಿಗೆ ಸಿಲುಕಿದ್ದು ಈ ದುರಂತವನ್ನು ತಪ್ಪಿಸಲು ಅಂತರಾಷ್ಟ್ರೀಯ ಸಮುದಾಯ ಗಮನ ಹರಿಸಬೇಕಾಗಿದೆ ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.

  ಅಫ್ಗಾನ್ಗೆ ನೆರವು ಸಂಗ್ರಹಿಸುವ ಉದ್ದೇಶದಲ್ಲಿ ಗುರುವಾರ ನಡೆದ ದೇಣಿಗೆದಾರರ ಸಮಾವೇಶದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಗಳ ಸಂಯೋಜಕ ಮಾರ್ಟಿನ್ ಗ್ರಿಫಿತ್, ಉಕ್ರೇನ್ನ ಬಿಕ್ಕಟ್ಟು ಕೂಡಾ ಗಂಭೀರ ವಿಷಯ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಫ್ಗಾನಿಸ್ತಾನ ನಮ್ಮ ಆತ್ಮಕ್ಕೆ ಬದ್ಧತೆ ಮತ್ತು ನಿಷ್ಟೆಯನ್ನು ನೆನಪಿಸುವ ಕರೆ ನೀಡುತ್ತದೆ ಎಂದರು.

ವರ್ಚುವಲ್ ವೇದಿಕೆಯ ಮೂಲಕ ನಡೆದ ದೇಣಿಗೆದಾರರ ಸಮಾವೇಶದ ಸಹಪ್ರಾಯೋಜಕರಾದ ವಿಶ್ವಸಂಸ್ಥೆ, ಬ್ರಿಟನ್, ಜರ್ಮನಿ ಮತ್ತು ಖತರ್ ದೇಶಗಳು, ಅಂತರಾಷ್ಟ್ರೀಯ ಸಮುದಾಯ ಅಫ್ಗಾನ್ ಜನತೆಯನ್ನು ಮರೆಯಬಾರದು. ಆ ದೇಶದ 60%ದಷ್ಟು ಜನತೆ ಬದುಕುಳಿಯಲು ನೆರವಿನ ಅಗತ್ಯವಿದೆ ಎಂದು ಒತ್ತಾಯಿಸಿದವು. ಉಕ್ರೇನ್ನ ಬಿಕ್ಕಟ್ಟಿಗೆ ಆದ್ಯತೆ ನೀಡುವ ಭರದಲ್ಲಿ ಅಫ್ಗಾನಿಸ್ತಾನದ ಸಮಸ್ಯೆಯನ್ನು ನಿರ್ಲಕ್ಷಿಸಬಾರದು ಎಂದು ಈ ದೇಶಗಳು ಆಗ್ರಹಿಸಿವೆ. 2021ರಲ್ಲಿ ಅಫ್ಗಾನ್ಗೆ ಒದಗಿಸಲಾಗಿದ್ದ ಮಾನವೀಯ ನೆರವಿನ 3 ಪಟ್ಟು ಹೆಚ್ಚು ಆರ್ಥಿಕ ನೆರವು ಈಗ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಬ್ರಿಟನ್ ಮುಂದಿನ ಆರ್ಥಿಕ ವರ್ಷದಲ್ಲಿ 380 ಮಿಲಿಯನ್ ಡಾಲರ್ ನೆರವು ಒದಗಿಸುವ ಭರವಸೆ ನೀಡಿದೆ.

ಈ ಸಂದರ್ಭ ಮಾತನಾಡಿದ ಖತರ್ ನ ವಿದೇಶ ಸಚಿವಾಲಯದ ವಕ್ತಾರ ಮಜೀದ್ ಅಲ್ಅನ್ಸಾರಿ, ಇಸ್ಲಾಮ್ ಧರ್ಮದ ಬೋಧನೆಗಳು ಮಹಿಳೆಯರ ಹಕ್ಕನ್ನು ಸೀಮಿತಗೊಳಿಸುವುದಿಲ್ಲ ಎಂಬುದನ್ನು ತಾಲಿಬಾನ್ ತಿಳಿದುಕೊಳ್ಳುವ ಅಗತ್ಯವಿದೆ. ಈ ಸಮಾವೇಶದಲ್ಲಿ ಅಫ್ಗಾನಿಸ್ತಾನಕ್ಕೆ ನೆರವು ನೀಡುವ ವಾಗ್ದಾನದ ಜತೆಗೇ, ಅಫ್ಗಾನಿಸ್ತಾನವನ್ನು ಮತ್ತೊಮ್ಮೆ ಪ್ರತ್ಯೇಕಿಸದಿರುವ ಪ್ರಾಮುಖ್ಯತೆಯನ್ನೂ ಒತ್ತಿಹೇಳುತ್ತೇವೆ . ಮಾನವ ಹಕ್ಕುಗಳನ್ನು ನಿರ್ಬಂಧಿಸಿದ ಪ್ರಕರಣ ವರದಿಯಾದರೆ ಆ ಬಗ್ಗೆ ತಾಲಿಬಾನ್ನೊಂದಿಗೆ ಸ್ಪಷ್ಟವಾಗಿ ಮಾತನಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News