ಫಿಫಾ ವಿಶ್ವಕಪ್ ಹಣಾಹಣಿ: ಯಾವ ತಂಡ ಯಾವ ಗುಂಪು ?

Update: 2022-04-02 02:21 GMT
Photo: twitter.com/FIFAcom

ದೋಹಾ: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ 'ಡ್ರಾ' ವನ್ನು ಶುಕ್ರವಾರ ದೋಹಾದಲ್ಲಿ ಪ್ರಕಟಿಸಲಾಗಿದ್ದು, ಮಾಜಿ ಚಾಂಪಿಯನ್ನರಾದ ಜರ್ಮನಿ ಮತ್ತು ಸ್ಪೇನ್ ಒಂದೇ ಗುಂಪಿನಲ್ಲಿವೆ. ಅಂತೆಯೇ ರಾಜಕೀಯ ಮತ್ತು ಭೌಗೋಳಿಕ ಕಾರಣಕ್ಕಾಗಿ ಬದ್ಧವೈರಿಗಳೆನಿಸಿಕೊಂಡಿರುವ ಅಮೆರಿಕ ಹಾಗೂ ಇರಾನ್ ಕೂಡಾ ಒಂದೇ ಗುಂಪಿಗೆ ಸೇರಿವೆ.

ಜರ್ಮನಿ ಹಾಗೂ ಸ್ಪೇನ್ ಜತೆ ಜಪಾನ್ ಇ ಗುಂಪಿನಲ್ಲಿದೆ. ಈ ಗುಂಪಿನ ಮತ್ತೊಂದು ತಂಡ ಯಾವುದು ಎನ್ನುವುದು ಜೂನ್‍ನಲ್ಲಿ ಕೋಸ್ಟರಿಕಾ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ನಡೆಯುವ ಅಂತರ ಖಂಡ ಪ್ಲೇ ಆಫ್ ಪಂದ್ಯದ ಬಳಿಕ ನಿರ್ಧಾರವಾಗಲಿದೆ. ವಿಜೇತ ತಂಡ ಇ ಗುಂಪಿಗೆ ಸೇರ್ಪಡೆಯಾಗಲಿದೆ.

ಇರಾನ್ ಹಾಗೂ ಅಮೆರಿಕ 1998ರಲ್ಲಿ ಫ್ರಾನ್ಸ್ ವಿಶ್ವಕಪ್‍ನಲ್ಲಿ ಬಿ ಗುಂಪಿನಲ್ಲಿ ಪರಸ್ಪರ ಸೆಣೆಸಿದ್ದವು. ಈ ಪಂದ್ಯದಲ್ಲಿ ಇರಾನ್ 2-1 ಗೋಲುಗಳ ಜಯ ಸಾಧಿಸಿತ್ತು. ಇಂಗ್ಲೆಂಡ್ ತಂಡ ಕೂಡಾ ಬಿ ಗುಂಪಿನಲ್ಲಿದ್ದು, ಮೊದಲ ದಿನವಾದ ನವೆಂಬರ್ 21ರಂದು ಇರಾನ್ ವಿರುದ್ಧ ಸೆಣೆಸಲಿದೆ. ನಾಲ್ಕು ವರ್ಷ ಹಿಂದೆ ರಷ್ಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದ ಗರೆತ್ ಸೌತ್‍ಗೇಟ್ ತಂಡ 2020ರ ಯೂರೊ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು. ಈ ಗುಂಪಿಗೆ ವೇಲ್ಸ್ ಅಥವಾ ಸ್ಕಾಟ್ಲೆಂಡ್ ಇಲ್ಲವೇ ಉಕ್ರೇನ್ ಸೇರುವ ಸಾಧ್ಯತೆ ಇದೆ. ಜೂನ್‍ನಲ್ಲಿ ನಡೆಯುವ ಯುರೋಪಿಯನ್ ಪ್ಲೇ ಆಫ್ಸ್ ಬಳಿಕ ಈ ಸ್ಥಾನ ಭರ್ತಿಯಾಗಲಿದೆ.

ಮೊದಲ ಬಾರಿಗೆ ವಿಶ್ವಕಪ್‍ನಲ್ಲಿ ಸೆಣೆಸುತ್ತಿರುವ ಅತಿಥೇಯ ದೇಶವಾದ ಕತರ್, ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಈಕ್ವೆಡಾರ್ ಸವಾಲನ್ನು ಎದುರಿಸಲಿದೆ. ದೋಹಾದಿಂದ 35 ಕಿಲೋಮೀಟರ್ ದೂರದ ಅಲ್ ಬೈತ್ ಸ್ಟೇಡಿಯಂನಲ್ಲಿ 60 ಸಾವಿರ ಪ್ರೇಕ್ಷಕರ ನಡುವೆ ಈ ಪಂದ್ಯ ನಡೆಯಲಿದೆ. ಆಫ್ರಿಕನ್ ಚಾಂಪಿಯನ್ ಸೆನೆಗಲ್ ಮತ್ತು ನೆದರ್ಲೆಂಡ್ಸ್ ವಿರುದ್ಧವೂ ಕತರ್ ಸೆಣೆಸಲಿದೆ.

ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಡೆನ್ಮಾರ್ಕ್ ಮತ್ತು ಟ್ಯೂನೇಶಿಯಾ ಜತೆ ಡಿ ಗುಂಪಿನಲ್ಲಿದೆ. ಈ ಗುಂಪಿಗೆ ಕೊನೆಯ ತಂಡವಾಗಿ ಪ್ರವೇಶಿಸಲು ಆಸ್ಟ್ರೇಲಿಯಾ, ಪೆರು ಮತ್ತು ಯುಎಇ ಸೆಣೆಸಾಡಬೇಕಿದೆ.

ದಾಖಲೆ ಐದು ಬಾರಿ ವಿಜೇತವಾಗಿರುವ ಬ್ರೆಝಿಲ್ ತಂಡ ಸೈಬೀರಿಯಾ, ಸ್ವಿಡ್ಝರ್‍ಲೆಂಡ್ ಮತ್ತು ಕ್ಯಾಮರೂನ್ ವಿರುದ್ಧ ಜಿ ಗುಂಪಿನಲ್ಲಿ ಆಡಲಿದೆ. ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ, ಸೌದಿ ಅರೇಬಿಯಾ, ಮೆಕ್ಸಿಕೊ ಹಾಗೂ ಪೋಲಂಡ್ ಸಿ ಗುಂಪಿನಲ್ಲಿವೆ.

ಕ್ರಿಸ್ಟಿಯಾನೊ ರೊನಾಲ್ಡೊ (38) ಅವರಿಗೆ ವಿಶ್ವಕಪ್ ಗೆಲ್ಲುವ ಕೊನೆಯ ಅವಕಾಶ ಈ ಬಾರಿ ಇದ್ದು, ಪೋರ್ಚ್‍ಗಲ್ ತಂಡ ಘಾನಾ, ಉರಗ್ವೇ ಮತ್ತು ದಕ್ಷಿಣ ಕೊರಿಯಾ ಜತೆ ಎಚ್ ಗುಂಪಿನಲ್ಲಿದೆ. 2018ರ ರನ್ನರ್ ಅಪ್ ಕ್ರೊವೇಶಿಯಾ, ಬೆಲ್ಜಿಯಂ ಮತ್ತು ಮೊರಾಕೊ ಜತೆಗೆ ಎಫ್ ಗುಂಪಿನಲ್ಲಿದ್ದು, ಗುಂಪಿನ ಮತ್ತೊಂದು ತಂಡವಾಗಿ ಕೆನಡಾ 26 ವರ್ಷಗಳಲ್ಲಿ ಮೊದಲ ಬಾರಿಗೆ ರಹದಾರಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News