×
Ad

ಪ.ಜಾ ಪ್ರಮಾಣಪತ್ರ ಬೇಡಿಕೆ ಧರಣಿಗೆ ಕೊಂಕಣಖಾರ್ವಿ ಸಮಾಜ ಬೆಂಬಲ; 12ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

Update: 2022-04-02 19:31 IST

ಭಟ್ಕಳ: ಪರಿಶಿಷ್ಠಜಾತಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿ ಉ.ಕ.ಜಿಲ್ಲೆಯ ಮೊಗೇರ್ ಸಮುದಾಯ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದ್ದು. ಭಟ್ಕಳ ತಾಲೂಕು ಕೊಂಕಣಖಾರ್ವಿ ಸಮಾಜವು ಮೊಗೇರರ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ಶನಿವಾರ ಧರಣಿ ನಿರತರನ್ನು ಭೇಟಿಯಾಗಿ ಮಾತನಾಡಿದ ಅಖಿಲಾ ಭಾರತೀಯ ಕೊಂಕಣಖಾರ್ವಿ ಸಮಾಜದ ರಾಷ್ಟ್ರೀಯ ಕಾರ್ಯದರ್ಶಿ ವಸಂತ್ ಖಾರ್ವಿ, ಮೊಗೇರ್ ಸಮುದಾಯಕ್ಕಾಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದಲ್ಲದೆ ಸಮಾಜಕಲ್ಯಾಣ ಇಲಾಖೆಯ ಸಚಿವ ಶ್ರೀನಿವಾಸ ಪೂಜಾರಿ ಮನೆಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದರು. ಅಷ್ಟೇ ಅಲ್ಲದೆ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೂ ಘೇರಾವು ಹಾಕಬೇಕೆಂದರು.

ಮಾದ್ಯಮದವರೊಂದಿಗೆ ಮಾತನಾಡಿದ ಅಖಿಲಾ ಭಾರತೀಯ ಕೊಂಕಣ ಖಾರ್ವಿ ಸಮಾಜದ ರಾಷ್ಟ್ರೀಯ ಕಾರ್ಯದರ್ಶಿ ವಸಂತ್ ಖಾರ್ವಿ, ಪ.ಜಾತಿಗೆ ಸೇರಿದ ಮೊಗೇರ್ ಸಮುದಾಯಕ್ಕಾದ ಅನ್ಯಾಯವನ್ನು ಖಂಡಿಸಲು ಖಾರ್ವಿ ಸಮಾಜ ನಿರ್ಣಯಿಸಿದ್ದು ನಮ್ಮ ಸಮಾಜಬಾಂಧವರೂ ಕೂಡ ಧರಣಿ ನಡೆಸಲು ತಯಾರಿದ್ದಾರೆ ಎಂದರು.

ಸಂವಿಧಾನ ನೀಡಿದಂತಹ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಯಾರು? ಒಂದು ವೇಳೆ ಮೊಗೇರ್ ಸಮುದಾಯಕ್ಕೆ ಪ.ಜಾ. ಪ್ರಮಾಣಪತ್ರ ತೆಗೆದು ಹಾಕುವುದಿದ್ದರೆ  ಎಲ್ಲರಿಗೂ ತೆಗೆದುಹಾಕಲಿ, ಒಂದು ಸಮಾಜಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ. ಹೈಕೋರ್ಟು, ಸುಪ್ರೀಂ ಕೋರ್ಟಿನ ಮಾತೇ ಸರ್ಕಾರ ಕೇಳುತ್ತಿಲ್ಲ ಎಂದಾದರೆ ಇನ್ನಾರ ಮಾತು ಕೇಳುತ್ತದೆ? ಎಂದು ಪ್ರಶ್ನಿಸಿದ ಅವರು, ಮೇಲ್ವರ್ಗ ಹಾಗೂ ಕೆಳವರ್ಗ ಸೇರಿಕೊಂಡು ಮೊಗೇರ್ ಸಮಾಜವನ್ನು ತುಳಿಯುತ್ತಿದೆ ಎಂದರು.

ಸಮುದ್ರದ ಅಲೆಗಳೊಂದಿಗೆ ಸೆಣಸಾಡುವ ಮೊಗೇರರು ತಮ್ಮ ಪ್ರಾಣದ ಹಂಗನ್ನು ತೊರೆದು ಮೀನುಗಾರಿಕೆ ನಡೆಸುತ್ತಾರೆ. ಒಂದು ದಿನ ಮಾರುಕಟ್ಟೆಗೆ ಮೀನು ಬರಲಿಲ್ಲ ಎಂದರೆ ಎಲ್ಲ ಕಡೆ ತೊಂದರೆಯಾಗುತ್ತದೆ. ಇದು ಆರ್ಥಿಕತೆಯ ಮೇಲೂ ಪ್ರಭಾವ ಬೀಳುತ್ತದೆ. ಮನುಷ್ಯನ ತಾಳ್ಮೆಗೆ ಒಂದು ಮಿತಿ ಇದೆ. ಆ ಮಿತಿಯು ಮೀರಿದಾಗ ಹೋರಾಟಗಳು ಆರಂಭಗೊಳ್ಳುತ್ತದೆ. ಸರ್ಕಾರ ಇನ್ನಾದರೂ ನಮ್ಮ ತಾಳ್ಮೆಯನ್ನು ಪರೀಕ್ಷೆಗೊಳಪಡಿಸಿದೆ ಕೂಡಲೇ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಕೊಂಕಣಖಾರ್ವಿ ಸಮಾಜದ ಅಧ್ಯಕ್ಷ ಸುಬ್ರಾಯ ಖಾರ್ವಿ,  ಮುಖಂಡರಾದ ಎನ್.ಡಿ. ಖಾರ್ವಿ, ಎನ್.ಟಿ ಎನ್.ಟಿ.ಖಾರ್ವಿ, ತಿಮ್ಮಪ್ಪ ಖಾರ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News