×
Ad

ಭಾರತ- ನೇಪಾಳ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆ

Update: 2022-04-03 07:44 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವೂಬಾ ಅವರು ಶನಿವಾರ ಉಭಯ ದೇಶಗಳ ನಡುವಿನ ಪ್ರಯಾಣಿಕ ರೈಲು ಸಂಚಾರಕ್ಕೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.

ಭಾರತದ ಜಯನಗರ ಮತ್ತು ನೇಪಾಳದ ಕುರ್ತಾ ನಡುವೆ ಈ ರೈಲು ಸಂಚರಿಸಲಿದ್ದು, ಉಭಯ ದೇಶಗಳ ಗಣ್ಯರು ಮತ್ತು ರೈಲ್ವೆ ಅಧಿಕಾರಿಗಳು ಸೇರಿದಂತೆ 150 ಮಂದಿಯನ್ನು ಹೊತ್ತ ರೈಲು ಸಂಚಾರ ಆರಂಭಿಸಿತು.

ಇದರೊಂದಿಗೆ ಉಭಯ ದೇಶಗಳ ನಡುವೆ ರಸ್ತೆ, ವಿಮಾನ ಮತ್ತು ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದಂತಾಗಿದೆ. ಉಭಯ ದೇಶಗಳು ವ್ಯಾಪಾರ ಮತ್ತು ಗಡಿಯಾಚೆಗಿನ ಸಂಪರ್ಕಗಳಿಗೆ ಆದ್ಯತೆ ನೀಡಲು ಒಪ್ಪಿಕೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ಜಯನಗರ- ಕುರ್ತಾ ರೈಲು ಹಳಿ ಯೋಜನೆ ಈ ಉಪಕ್ರಮದ ಭಾಗವಾಗಿದ್ದು, ಇಂಥ ಯೋಜನೆಗಳು ಉಭಯ ದೇಶಗಳ ನಡುವೆ ಸುಲಲಿತ ಮತ್ತು ಯಾವುದೇ ತಡೆಯಿಲ್ಲದೇ ಜನರ ವಿನಿಮಯಕ್ಕೆ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ರವಿವಾರದಿಂದ ಸಾಮಾನ್ಯ ಪ್ರಯಾಣಿಕರಿಗಾಗಿ ರೈಲು ಸಂಚಾರ ಆರಂಭವಾಗಲಿದೆ. ಈ ಪ್ರಯಾಣಕ್ಕೆ ಪ್ರಯಾಣಿಕರು ಭಾವಚಿತ್ರ ಇರುವ ಗುರುತಿನ ಚೀಟಿ ಹೊಂದಿರಬೇಕಾಗುತ್ತದೆ. 34.5 ಕಿಲೋಮೀಟರ್ ಅಂತರವನ್ನು ಈ ರೈಲು ಒಂದು ಗಂಟೆಯಲ್ಲಿ ಕ್ರಮಿಸಲಿದ್ದು, ಎಂಟು ನಿಲ್ದಾಣಗಳು ಇರುತ್ತವೆ.

ಬಿಹಾರದ ಮಧುಬಾನಿ ಜಿಲ್ಲೆಯ ಜಯನಗರದಿಂದ ಈ ಕಾಮಗಾರಿ ಆರಂಭವಾಗಿದ್ದು, ಮುಂದೆ ಕುರ್ತಾದಿಂದ 17 ಕಿಲೋಮೀಟರ್ ದೂರದ ಬಿಜ್ಲಾಪುರವರೆಗೆ ವಿಸ್ತರಿಸಲಾಗುತ್ತದೆ. ಅಂತಿಮವಾಗಿ ಬರ್ದಿಬಾಸ್ ವರೆಗೆ ಇದು ವಿಸ್ತರಣೆಗೊಳ್ಳಲಿದೆ. ಈ ಯೋಜನೆಗೆ ಭಾರತ ಸರ್ಕಾರ 787 ಕೋಟಿ ರೂಪಾಯಿ ಅನುದಾನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News