​ಶ್ರೀಲಂಕಾ: ಸರಕಾರ ಜಾರಿಗೊಳಿಸಿದ್ದ ಕರ್ಫ್ಯೂ ಧಿಕ್ಕರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

Update: 2022-04-03 18:39 GMT
photo courtesy:twitter/@globeandmail

ಶ್ರೀಲಂಕಾ, ಎ.3: ದೇಶದಲ್ಲಿ ಜಾರಿಯಲ್ಲಿರುವ ವಾರಾಂತ್ಯ ಕರ್ಫ್ಯೂವನ್ನು ಧಿಕ್ಕರಿಸಿದ ನೂರಾರು ವಿದ್ಯಾರ್ಥಿಗಳು ಶ್ರೀಲಂಕಾದ ಕ್ಯಾಂಡಿಯಲ್ಲಿ ಪ್ರತಿಭಟನೆ ಮುಂದುವರಿಸಿದ್ದು ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿರುವುದಾಗಿ ವರದಿಯಾಗಿದೆ.
 ಆರ್ಥಿಕ ಬಿಕ್ಕಟ್ಟನ್ನು ವಿರೋಧಿಸಿ ವಿದ್ಯಾರ್ಥಿಗಳು ಪೆರಡೆನಿಯಾ ವಿವಿ ಎದುರುಗಡೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಕರ್ಫ್ಯೂ ಉಲ್ಲಂಘಿಸಿದ ಕನಿಷ್ಟ 664 ಮಂದಿಯನ್ನು ಬಂಧಿಸಲಾಗಿದೆ. ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಶ್ರೀಲಂಕಾವು ಇದುವರೆಗೆ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಿದ್ದು ಆಹಾರ, ತೈಲ, ವಿದ್ಯುತ್ ಹಾಗೂ ಇತರ ಅಗತ್ಯ ವಸ್ತುಗಳ ಕೊರತೆ ಮತ್ತು ಬೆಲೆಏರಿಕೆಯಿಂದ ಹತಾಶರಾಗಿರುವ ಜನತೆ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊಲಂಬೊದಲ್ಲಿ ಶನಿವಾರ ವಿಪಕ್ಷ ಮುಖಂಡರು ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ಅವರ ಮನೆಯ ಎದುರು ಪೊಲೀಸರು ರ್ಯಾಲಿಯನ್ನು ತಡೆದರು. ಜಲಫಿರಂಗಿ, ಅಶ್ರುವಾಯುಗೆ ಬಗ್ಗಬೇಡಿ. ಶೀಘ್ರವೇ ಇದರ ದಾಸ್ತಾನೂ ಮುಗಿಯಲಿದೆ ಮತ್ತು ಇನ್ನಷ್ಟು ಖರೀದಿಸಲು ಸರಕಾರದ ಬಳಿ ಹಣವಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನಾಕಾರರು ಪೋಸ್ಟ್ ಮಾಡಿದ್ದಾರೆ.
  ಈ ಮಧ್ಯೆ, ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಶ್ರೀಲಂಕಾ ಸರಕಾರ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸ್ಯಾಪ್, ಯೂಟ್ಯೂಬ್ ಸಹಿತ ಎಲ್ಲಾ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ದೇಶ ಮತ್ತು ಜನತೆಯ ಹಿತದೃಷ್ಟಿಯಿಂದ ಶಾಂತಿ ಕಾಪಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀಲಂಕಾದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಜಯಂತ ಡಿಸಿಲ್ವ ಹೇಳಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿದ್ದು ಇದರಿಂದ ಶಂಕಿತ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ದೀರ್ಘಾವಧಿ ಬಂಧನದಲ್ಲಿಡಲು ಸರಕಾರಕ್ಕೆ ಅವಕಾಶವಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಅಗತ್ಯ ವಸ್ತು ಹಾಗೂ ಸೇವೆಗಳ ರಕ್ಷಣೆಗೆ ಈ ಕ್ರಮ ಅಗತ್ಯವಿದೆ ಎಂದು ರಾಜಪಕ್ಸ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News