ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್ : ಆರು ಮಂದಿ ಮೃತ್ಯು

Update: 2022-04-04 01:41 GMT

ಸ್ಯಾನ್‍ಫ್ರಾನ್ಸಿಸ್ಕೊ : ಕ್ಯಾಲಿಫೋರ್ನಿಯಾ ರಾಜಧಾನಿ ಸ್ಯಾಕ್ರಮೆಂಟೊದಲ್ಲಿ ರವಿವಾರ ನಡೆದ ಶೂಟೌಟ್‍ನಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟು, ಇತರ 12 ಮಂದಿ ಗಾಯಗೊಂಡಿದ್ದಾರೆ.

ಮಧ್ಯರಾತ್ರಿ ಬಳಿಕ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗಸ್ತು ತಿರುಗುತ್ತಿದ್ದ ಪೊಲೀಸರು ಗುಂಡಿನ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದರು ಎಂದು ನಗರ ಪೊಲೀಸ್ ಮುಖ್ಯಸ್ಥ ಕ್ಯಾಥಿ ಲೆಸ್ಟರ್ ಸುದ್ದಿಗಾರರಿಗೆ ತಿಳಿಸಿದರು.

"ಈ ಪ್ರದೇಶದಲ್ಲಿ ಜನದಟ್ಟಣೆ ಇತ್ತು. ಇದು ಸಮಾರಂಭವೇ ಅಥವಾ ಕೂಟವೇ ಎನ್ನುವುದು ನಮಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು. ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಪಂದಿಸಿದರೂ, ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸ್ ಪ್ರಕಟಣೆ ಹೇಳಿದೆ. ಹನ್ನೆರಡು ಮಂದಿ ಸಂತ್ರಸ್ತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಲಾಖೆ ಟ್ವೀಟ್ ಮಾಡಿದೆ.

ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೇಯರ್ ಡೆರಿಲ್ ಸ್ಟೆನ್‍ಬರ್ಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಘಟನೆ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪುರಾವೆ ಸಲ್ಲಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊ ಪ್ರಕಾರ, ಜನ ಬೀದಿಯಲ್ಲಿ ಜಗಳವಾಡುತ್ತಿದ್ದಾಗ ಗುಂಡಿನ ಶಬ್ದ ಕೇಳಿಬಂದಿದೆ. ಇದು ಘಟನೆಯ ವಿಡಿಯೊ ಎನ್ನುವುದು ಖಚಿತವಾಗಿಲ್ಲವಾದರೂ, ಈ ವಿಡಿಯೊ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News