ಪಾಕಿಸ್ತಾನದ ಗಾಯಕಿ ಅರೂಜ್ ಅಫ್ತಾಬ್ ಗೆ ಗ್ರ್ಯಾಮಿ ಪ್ರಶಸ್ತಿ
ಇಸ್ಲಮಾಬಾದ್, ಎ.4: ಪಾಕಿಸ್ತಾನದ ಗಾಯಕಿ ಅರೂಜ್ ಅಫ್ತಾಬ್ ಪ್ರತಿಷ್ಟಿತ ಗ್ರ್ಯಾಮಿ ಪುರಸ್ಕಾರ ಪಡೆದ ಪಾಕಿಸ್ತಾನದ ಪ್ರಥಮ ಮಹಿಳೆ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.
ಅವರು ಹಾಡಿದ ಮೊಹಬ್ಬತ್ ಗೀತೆಗಾಗಿ ‘ಬೆಸ್ಟ್ ಗ್ಲೋಬಲ್ ಪರ್ಫಾಮೆನ್ಸ್’ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ. ಕಳೆದ 15 ವರ್ಷದಿಂದ ನ್ಯೂಯಾರ್ಕ್ನಲ್ಲಿ ನೆಲೆಸಿರುವ 37 ವರ್ಷದ ಅರೂಜ್ ಪ್ರಾಚೀನ ಸೂಫಿ ಸಂಪ್ರದಾಯವನ್ನು ಜಾರ್, ಜನಪದದೊಂದಿಗೆ ಬೆಸೆಯುವ ತನ್ನ ಕಾರ್ಯಕ್ಕಾಗಿ ಜಾಗತಿಕ ಮನ್ನಣೆ ಪಡೆದವರು.
ಸೌದಿ ಅರೆಬಿಯಾದಲ್ಲಿ ಜನಿಸಿದ ಅರೂಜ್, ಬಾಸ್ಟನ್ನ ಪ್ರತಿಷ್ಟಿತ ಬರ್ಕ್ಲೆ ಸ್ಕೂಲ್ ಆಫ್ ಮ್ಯೂಸಿಕ್ನಲ್ಲಿ ಸಂಗೀತ ಅಭ್ಯಾಸ ನಡೆಸಿದರು. ‘ವಲ್ಚರ್ ಪ್ರಿನ್ಸ್’ ಎಂಬ ತನ್ನ ಮೂರನೇ ಸಂಗೀತ ಆಲ್ಬಮ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ್ದರು. ಇವರು ಹಾಡಿದ ಮೊಹಬ್ಬತ್ ಗೀತೆಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನ ಅಚ್ಚುಮೆಚ್ಚಿನ ಗೀತೆಗಳ ಪಟ್ಟಿಯಲ್ಲಿ ಸೇರಿಸಿದ್ದರು.
ರವಿವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಗ್ರ್ಯಾಮಿ ಪುರಸ್ಕಾರ ಪಡೆದ ಖುಷಿಯಲ್ಲಿ ಮಾತುಗಳೇ ಹೊರಡುತ್ತಿಲ್ಲ. ಇದು ತನಗೆ ದೊರಕಿರುವ ಅತ್ಯಂತ ದೊಡ್ಡ ಗೌರವವಾಗಿದೆ ಎಂದು ಅರೂಜ್ ಪ್ರತಿಕ್ರಿಯಿಸಿದ್ದಾರೆ.