ದಕ್ಷಿಣ ಆಫ್ರಿಕಾ ಆಟಗಾರರಿಂದ ಬಾಂಗ್ಲಾದೇಶ ಆಟಗಾರನಿಗೆ ನಿಂದನೆ: ಐಸಿಸಿಗೆ ದೂರು ನೀಡಿದ ಬಿಸಿಬಿ
ಢಾಕಾ, ಎ.5: ಡರ್ಬನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಆಟಗಾರರ "ಅಸ್ವೀಕಾರಾರ್ಹ" ನಿಂದನೆ(ಸ್ಲೆಡ್ಜಿಂಗ್) ಹಾಗೂ ಪದೇ ಪದೇ ದೂರು ನೀಡಿದರೂ ಅಂಪೈರ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಅಸಮರ್ಥರಾಗಿರುವುದಕ್ಕೆ ಅಸಮಾಧಾನಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಗೆ ಅಧಿಕೃತ ದೂರು ಸಲ್ಲಿಸಲು ಸಿದ್ಧವಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 53 ರನ್‌ಗಳಿಗೆ ಆಲೌಟ್ ಆದ ನಂತರ ಬಾಂಗ್ಲಾದೇಶ 220 ರನ್‌ಗಳಿಂದ ಸೋಲುಂಡಿತ್ತು. 2ನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಅಂಪೈರಿಂಗ್ ಗುಣಮಟ್ಟದ ಬಗ್ಗೆ ಬಿಸಿಬಿ ಅತೃಪ್ತಿ ಹೊರಹಾಕಿದೆ.
"ಮಹಮದುಲ್ ಹಸನ್ ಜಾಯ್ ಅವರು ಬ್ಯಾಟಿಂಗ್‌ಗೆ ಹೊರಟಾಗ ದಕ್ಷಿಣ ಆಫ್ರಿಕಾ ಆಟಗಾರರು ಅವರನ್ನು ಸುತ್ತುವರೆದರು. ಅವರು ಏನೋ ಹೇಳುತ್ತಿದ್ದರು. ಹಸನ್ ಜಾಯ್ ಜೂನಿಯರ್ ಆಟಗಾರರಾಗಿದ್ದರಿಂದ ಮತ್ತೆ ಏನನ್ನೂ ಹೇಳಲಿಲ್ಲ. ಇದು ನಿಂದನೀಯವಾಗಿತ್ತು. ಅಂಪೈರ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸುವ ಬದಲು ನಾವು ಸ್ಲೆಡ್ಜಿಂಗ್ ವಿರುದ್ಧ ದೂರು ನೀಡಿದಾಗ ನಮ್ಮ ಆಟಗಾರರಿಗೆ ಎಚ್ಚರಿಕೆ ನೀಡುತ್ತಾರೆ’’ ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಜಲಾಲ್ ಯೂನಸ್ ESPNCricinfo ಗೆ ತಿಳಿಸಿದ್ದಾರೆ.