×
Ad

ಕರ್ನಾಟಕದ ಅವೈಸ್‌ ಅಹ್ಮದ್‌ ಸಾಧನೆ: ಎಲಾನ್‌ ಮಸ್ಕ್‌ ರ ಸ್ಪೇಸ್‌ಎಕ್ಸ್‌ ಮೂಲಕ ಭಾರತದ ಮೊದಲ ವಾಣಿಜ್ಯ ಉಪಗ್ರಹ ಉಡಾವಣೆ

Update: 2022-04-05 16:55 IST
ಸಹೋದ್ಯೋಗಿಗಳ ಜೊತೆ ಆವೈಸ್‌ ಅಹ್ಮದ್‌

ಹೊಸದಿಲ್ಲಿ: ಭಾರತದ ಸ್ಪೇಸ್‍ಟೆಕ್ ಸ್ಟಾರ್ಟ್ ಅಪ್ ಆಗಿರುವ ಪಿಕ್ಸೆಲ್ ತನ್ನ ಪ್ರಥಮ ವಾಣಿಜ್ಯ ಉಪಗ್ರಹ ʼಶಕುಂತಲಾ' ಅನ್ನು ಉಡಾಯಿಸಿದೆ. ಇದೊಂದು ಪೂರ್ಣ-ಪ್ರಮಾಣದ ವಾಣಿಜ್ಯ ಉಪಗ್ರಹವಾಗಿದ್ದು ಇಲಾನ್ ಮಸ್ಕ್ ಅವರ ಸ್ಪೇಸ್‍ಎಕ್ಸ್ ನ ಫಾಲ್ಕನ್-9 ರಾಕೆಟ್‍ನೊಂದಿಗೆ ಇದನ್ನು ಉಡಾಯಿಸಲಾಗಿದೆ. ಇದರ ನಿರ್ಮಾತೃ ಕರ್ನಾಟಕ ಮೂಲದ ಅವೈಸ್‌ ಅಹ್ಮದ್‌ ಎನ್ನುವುದು ಸದ್ಯ ಹೆಮ್ಮೆಯ ಸಂಗತಿಯಾಗಿದೆ.

ಇಲ್ಲಿಯ ತನಕ ಬಾಹ್ಯಾಕಾಶಕ್ಕೆ ಹಾರಿಸಲಾದ ಉಪಗ್ರಹಗಳಲ್ಲಿಯೇ ಅತ್ಯಂತ ಉನ್ನತ ರಿಸೊಲ್ಯೂಶನ್ ಹೊಂದಿದ ಹೈಪರ್ ಸ್ಪೆಕ್ಟ್ರಲ್ ಕಮರ್ಷಿಯಲ್ ಕ್ಯಾಮೆರಾಗಳನ್ನು ಈ ಉಪಗ್ರಹ ಹೊಂದಿದೆ. ಉಪಗ್ರಹವನ್ನು ಕಳೆದ ಶುಕ್ರವಾರ ಅಮೆರಿಕಾದ ಕೇಪೆ ಕೆನವರೆಲ್‍ನಿಂದ ಸ್ಪೇಸ್‍ ಎಕ್ಸ್ ನ ಟ್ರಾನ್ಸ್‍ಪೋರ್ಟರ್-4 ಮಿಷನ್ ನೊಂದಿಗೆ ಉಡಾವಣೆ ಮಾಡಲಾಗಿದೆ.

ಈ ಉಪಗ್ರಹದ ಹಿಂದಿನ ರೂವಾರಿ ಪಿಕ್ಸೆಲ್ ಸಿಇಒ ಕರ್ನಾಟಕ ಮೂಲದ ಅವೈಸ್‌ ಅಹ್ಮದ್‌ ಪ್ರತಿಕ್ರಿಯಿಸಿ, 2017ರಲ್ಲಿ ತಮ್ಮ ಸ್ಟಾರ್ಟ್-ಅಪ್ ಸ್ಪೇಸ್‍ಎಕ್ಸ್‍ನ ಹೈಪರ್‍ಲೂಪ್ ಪಾಡ್ ಸ್ಪರ್ಧೆಯ ಕೆಲವೇ ಕೆಲವು ಫೈನಲಿಸ್ಟ್‍ಗಳಲ್ಲಿ ಒಂದಾಗಿದ್ದರೆ ಇದೀಗ ಸ್ಪೇಸ್‍ಎಕ್ಸ್‍ನ ನಾಲ್ಕನೇ ರೈಡ್‍ಶೇರ್ ಮಿಷನ್ ಭಾಗವಾಗಿ ಉಪಗ್ರಹದ ಉಡಾವಣೆ ಮಾಡಿ ಬಹಳ ದೂರ ಸಾಗಿದೆ ಎಂದಿದ್ದಾರೆ.

ಆವೇಶ್ ಅಹ್ಮದ್‌ ರವರು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ನದೀಮ್‌ ಅಹ್ಮದ್‌ ರ ಪುತ್ರನಾಗಿದ್ದಾರೆ. ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ಬಳಿಕ ಅವರು ಪಿಕ್ಸೆಲ್‌ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ. ಶಕುಂತಲಾ ಉಪಗ್ರಹವನ್ನು ಉಡಾವಣೆ ಮಾಡಿದ ಬಳಿಕ ಇದೀಗ ಆನಂದ್‌ ಉಪಗ್ರಹವನ್ನು ಉಡಾವಣೆ ಮಾಡುವ ಗುರಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಶಕುಂತಲಾ (ಟಿಡಿ-2) 15 ಕೆಜಿಗಿಂತಲೂ ಕಡಿಮೆ ತೂಗುತ್ತಿದ್ದು,  ಬಾಹ್ಯಾಕಾಶದ ಚಿತ್ರಗಳನ್ನು 150ಕ್ಕೂ ಅಧಿಕ ಬಣ್ಣಗಳ ಬ್ಯಾಂಡ್‍ಗಳಲ್ಲಿ ಸೆರೆ ಹಿಡಿಯಬಹುದಾಗಿದೆ ಹಾಗೂ  ತಲಾ ಪಿಕ್ಸೆಲ್‍ಗೆ 10 ಮೀಟರ್‍ನಷ್ಟು ರಿಸೊಲ್ಯೂಷನ್ ಹೊಂದಿದೆ. ಇದನ್ನು ಬಳಸಿ ನಮ್ಮ ಉಪಗ್ರಹವು ಕಣ್ಣಿಗೆ ಕಾಣದ ಕೆಲವೊಂದು ಬದಲಾವಣೆಗಳಾದ ಅರಣ್ಯ ನಾಶ, ನೈಸರ್ಗಿಕ ಅನಿಲ ಸೋರಿಕೆಗಳು, ಮಾಲಿನ್ಯ, ಬೆಳೆಗಳ ಆರೋಗ್ಯ ಕ್ಷೀಣಿಸುವುದು ಹಾಗೂ  ಕರಗುತ್ತಿರುವ ಹಿಮಗಡ್ಡೆಗಳ ಚಿತ್ರಗಳನ್ನು ಸೆರೆಹಿಡಿದು ಉಡಾವಣೆಯಾದ ಕೆಲವೇ ವಾರಗಳಲ್ಲಿ ಸಂಗ್ರಹಿಸಲು ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News