5 ವರ್ಷಗಳಲ್ಲಿ 250ಕ್ಕೂ ಅಧಿಕ ಪೊಲೀಸರ ಆತ್ಮಹತ್ಯೆ: ನಿವೃತ್ತ ಪೊಲೀಸ್ ಸಂದೀಪ್
ಉಡುಪಿ : ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡ, ವೇತನ, ಆರೋಗ್ಯ, ಸಿಬ್ಬಂದಿ ಕೊರತೆ ಹಾಗೂ ಆಡರ್ಲಿ ಪದ್ಧತಿಯ ಪರಿಣಾಮ 250ಕ್ಕೂ ಅಧಿಕ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದುದರಿಂದ ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ನಿವೃತ್ತ ಪೊಲೀಸ್ ಸಂದೀಪ್ ಕುಮಾರ್ ಎಂ. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರುವ 1.5ಲಕ್ಷ ಸೇವಾನಿರತ ಪೊಲೀಸರು ಹಾಗೂ ನಿವೃತ್ತ ಪೊಲೀಸರ ಹಿತೈಷಿಗಳು, ಕುಟುಂಬಸ್ಥರು ಸೇರಿ ಸುಮಾರು ಐದು ಲಕ್ಷ ಮಂದಿ ಇದ್ದಾರೆ. ಇವರೆಲ್ಲ ಈ ಅಭಿಯಾನದಲ್ಲಿ ಕೈಜೋಡಿಸಿ ಆಯಾ ಕ್ಷೇತ್ರದ ಶಾಸಕರು, ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ ಎಂದರು.
ಔರಾದ್ಕರ್ ವರದಿಯ ಪ್ರಕಾರ ಕೇವಲ ಹೊಸದಾಗಿ ಆಯ್ಕೆಯಾಗಿರುವ ಸಿಬ್ಬಂದಿಗೆ ಮಾತ್ರ ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದ ಉಳಿದವರಿಗೆ ಅನ್ಯಾಯವಾಗಿದೆ. ಈ ವೇತನ ತಾರತಮ್ಯವನ್ನು ಸರಿಪಡಿಸಬೇಕು. ಪೊಲೀಸರ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಾನ್ ಮೆಡಿಕಲ್ ಚಾರ್ಜರ್ಸ್ ಎಂಬ ಹೆಸರಿನಲ್ಲಿ ಆಸ್ಪತ್ರೆಯ ಬಿಲ್ಲಿನ ಮೊತ್ತದಲ್ಲಿ ಸಿಬ್ಬಂದಿ ಅವರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಇದರಲ್ಲಿರುವ ಅನೇಕ ತೊಡಕು ಗಳನ್ನು ನಿವಾರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಆಡರ್ಲಿ ಪದ್ಧತಿ ನಿಷೇಧ ಮಾಡಿದ್ದರೂ ಇನ್ನು ಸರಿಯಾಗಿ ಕಾರ್ಯಗತ ಗೊಂಡಿಲ್ಲ. ಇನ್ನೂ ನೂರಾರು ಸಿಬ್ಬಂದಿ ಮೇಲಾಧಿಕಾರಿಯವರ ಮನೆಯಲ್ಲಿ ಅಡುಗೆ ಹಾಗೂ ಇನ್ನಿತರ ಕೆಲಸ ಮಾಡಿಕೊಂಡಿದ್ದಾರೆ. ಇದರ ಬದಲಿಗೆ ಫಾಲೋವರ್ಸ್ ನೇಮಕ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.