×
Ad

ಅಸಮಾನತೆ ನಿವಾರಣೆಗಾಗಿ ಹೋರಾಡಿದ ಬಾಬು ಜಗಜೀವನ್ ರಾಮ್: ಡಿಸಿ ಕೂರ್ಮಾರಾವ್

Update: 2022-04-05 20:28 IST

ಉಡುಪಿ : ಸಮಾಜದಲ್ಲಿದ್ದ ವಿವಿಧ ಜಾತಿ ಮತ್ತು ವರ್ಗಗಳ ನಡುವಿನ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯನ್ನು ಮೂಡಿಸುವಲ್ಲಿ ಡಾ. ಬಾಬು ಜಗಜೀವನರಾಮ್ ಅವಿರತವಾಗಿ ಶ್ರಮಿಸಿದ್ದರು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಮಂಗಳವಾರ ನಗರದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ದಲ್ಲಿ, ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹಾಗೂ ಪ.ಜಾತಿ ಮತ್ತು ಪ.ವರ್ಗಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಾಬು ಜಗಜೀವನರಾಮ್  ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತಮ್ಮ ಬಾಲ್ಯದಿಂದಲೇ ಅಸಮಾನತೆ ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಜಗಜೀವನರಾಮ್, ಕೇಂದ್ರ ಸರಕಾರದಲ್ಲಿ ಬಹುತೇಕ ಎಲ್ಲಾ ಇಲಾಖೆಗಳ ಸಚಿವ ರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಸದಾ ಆಧ್ಯಯನಶೀಲರಾಗಿದ್ದ ಅವರು ಉತ್ತಮ ಜ್ಞಾನ ಸಂಪಾದನೆ ಮಾಡಿದ್ದರು. ಅವರ ಹೋರಾಟ ಹಾಗೂ ಜೀವನದ ಮೌಲ್ಯಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಅಲ್ಲದೇ ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಇಂತಹ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಬೇಕು ಎಂದರು.

ಡಾ.ಬಾಬು ಜಗಜೀವನರಾಮ್ ವ್ಯಕ್ತಿತ್ವದ ಕುರಿತು ಉಪನ್ಯಾಸ ನೀಡಿದ ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೂವಾಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ಮರೆಯದ ಮತ್ತು ಮರೆಯಬಾರದ ವ್ಯಕ್ತಿತ್ವ ಬಾಬು ಜಗಜೀವನ ರಾಂ ಅವರದು. ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧಿ ಅವರಿಗೆ ನೀಡುವ ಗೌರವ ಇವರಿಗೂ ಸಲ್ಲಬೇಕು ಎಂದರು.

ತಮ್ಮ ಅಧಿಕಾರಾವಧಿಯಲ್ಲಿ ಕಾರ್ಮಿಕರ, ಶೋಷಿತರ ಪರ ಧ್ವನಿಯಾಗಿ, ರೈತರಲ್ಲಿ ಹೋರಾಟ ಮತ್ತು ಪ್ರತಿರೋಧದ ಪ್ರಜ್ಞೆ ಬಿತ್ತಿದ್ದರು. ರೈತರು ಮತ್ತು ಸೈನಿಕರಿಗೆ ಬೆನ್ನೆಲುಬಾಗಿ ವಿವಿಧ ಅಭಿವೃದ್ಧಿ ಪರ ಯೋಜನೆ ಗಳನ್ನು ಜಾರಿಗೊಳಿಸಿ, ಬಾಬೂಜಿ ಎಂದೇ ಪ್ರಸಿದ್ಧರಾಗಿದ್ದರು. ಸಂವಿಧಾನ ಕರಡು ರಚನಾ ಸಮಿತಿ ಸದಸ್ಯ ರಾಗಿ, ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಎಲ್ಲಾ ವರ್ಗಗಳ ನಡುವೆ ಸಮಾನತೆ ತರಲು ಶ್ರಮಿಸಿದ್ದರು. ಹಸಿರುಕ್ರಾಂತಿ ಮತ್ತು ಸಂಪರ್ಕ ಕ್ರಾಂತಿಯ ಹರಿಕಾರರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಅಪರ ಜಿಲ್ಲಾಧಿಕಾರಿ ವೀಣಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪ.ಜಾತಿ ಮತ್ತು ಪ.ವರ್ಗಗಳ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ, ಬಾಬು ಜಗಜೀವನರಾಮ್ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಉಡುಪಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ಸ್ವಾಗತಿಸಿದರು. ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ. ಡಾ. ನಿರ್ಮಲಾ ಕುಮಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News