ರಶ್ಯದ 45 ರಾಜತಾಂತ್ರಿಕರನ್ನು ಉಚ್ಛಾಟಿಸಿದ ಡೆನ್ಮಾರ್ಕ್, ಇಟಲಿ

Update: 2022-04-05 17:36 GMT

ಕೊಪೆನ್ಹೇಗನ್, ಎ.5: ದೇಶದಲ್ಲಿ ರಾಜತಾಂತ್ರಿಕರೆಂದು ನೋಂದಾಯಿಸಿಕೊಂಡಿದ್ದ ರಶ್ಯದ 15 ಗುಪ್ತಚರ ಅಧಿಕಾರಿಗಳನ್ನು ದೇಶದಿಂದ ಉಚ್ಛಾಟಿಸಿರುವುದಾಗಿ ಡೆನ್ಮಾರ್ಕ್ ಹೇಳಿದೆ. ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ರಶ್ಯದ 30 ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸಿರುವುದಾಗಿ ಇಟಲಿಯೂ ಘೋಷಿಸಿದೆ.

ರಶ್ಯವು ಉಕ್ರೇನ್ ವಿರುದ್ಧ ನಡೆಸಿದ ಸಮರ್ಥನೀಯವಲ್ಲದ ಆಕ್ರಮಣದಿಂದ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತು ಯುರೋಪ್ ಮತ್ತು ಅಟ್ಲಾಂಟಿಕ್ ಪಾಲುದಾರ ದೇಶಗಳೊಂದಿಗಿನ ಒಪ್ಪಂದದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಟಲಿಯ ವಿದೇಶ ಸಚಿವ ಲುಯಿಗಿ ಡಿ ಮಯಿಯೊ ಮಂಗಳವಾರ ಹೇಳಿದ್ದಾರೆ. ಮತ್ತೊಂದೆಡೆ, ರಶ್ಯದ ರಾಜತಾಂತ್ರಿಕರೆಂದು ನೋಂದಾಯಿಸಿಕೊಂಡಿದ್ದ 15 ಅಧಿಕಾರಿಗಳು ಡೆನ್ಮಾರ್ಕ್ನಲ್ಲಿ ಗೂಢಚರರಾಗಿ ಕೆಲಸ ಮಾಡುತ್ತಿರುವುದಕ್ಕೆ ಸೂಕ್ತ ಪುರಾವೆ ಲಭಿಸಿದ್ದರಿಂದ ಅವರನ್ನು ಉಚ್ಛಾಟಿಸಿದ್ದು 14 ದಿನದೊಳಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ಡೆನ್ಮಾರ್ಕ್ನ ವಿದೇಶ ವ್ಯವಹಾರ ಇಲಾಖೆಯ ಸಚಿವ ಜೆಪೆ ಕೊಫೊಡ್ ಹೇಳಿದ್ದಾರೆ.

ಡೆನ್ಮಾರ್ಕ್ನಲ್ಲಿನ ರಶ್ಯದ ರಾಯಭಾರಿಗೆ ಮಂಗಳವಾರ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ಉಕ್ರೇನ್ನ ಬುಛಾ ನಗರದಲ್ಲಿ ಉಕ್ರೇನ್ ನಾಗರಿಕರ ವಿರುದ್ಧ ರಶ್ಯ ಸೇನೆ ತೋರಿದ ಕ್ರೂರತೆಯನ್ನು ಖಂಡಿಸಲಾಗಿದ್ದು ನಾಗರಿಕರ ವಿರುದ್ಧದ ದಾಳಿ ಯುದ್ಧಾಪರಾಧವಾಗಿದೆ ಎಂದು ಡೆನ್ಮಾರ್ಕ್ ವಿದೇಶಾಂಗ ಇಲಾಖೆ ಹೇಳಿದ್ದು, ಆದರೆ ರಶ್ಯದೊಂದಿಗಿನ ರಾಜತಾಂತ್ರಿಕ ಬಾಂಧವ್ಯ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಈ ಕ್ರಮಗಳಿಗೆ ರಶ್ಯ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದು ರಶ್ಯ ವಿದೇಶ ವ್ಯವಹಾರ ಇಲಾಖೆಯ ವಕ್ತಾರೆ ಮಾರಿಯಾ ಝಕರೋವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News