ಪಾಕಿಸ್ತಾನದಲ್ಲಿ ನೂತನ ಸರಕಾರ ರಚನೆಯಾಗುವವರೆಗೆ ಆರ್ಥಿಕ ನೆರವಿಗೆ ತಡೆ: ಐಎಂಎಫ್

Update: 2022-04-05 17:47 GMT

ಇಸ್ಲಮಾಬಾದ್, ಎ.5: ಪಾಕಿಸ್ತಾನದಲ್ಲಿ ಹೊಸ ಸರಕಾರ ರಚನೆಯಾಗುವವರೆಗೆ ಆ ದೇಶಕ್ಕೆ ಒದಗಿಸುವ ಆರ್ಥಿಕ ನೆರವನ್ನು ತಡೆಹಿಡಿಯುವುದಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಮಂಗಳವಾರ ಹೇಳಿದೆ.

ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಒದಗಿಸುವ 6 ಬಿಲಿಯನ್ ಡಾಲರ್ ನೆರವನ್ನು ಹೊಸ ಸರಕಾರ ರಚನೆಯಾದ ಮೇಲೆ ಬಿಡುಗಡೆಗೊಳಿಸಲಾಗುವುದು ಎಂದು ಇಸ್ಲಮಾಬಾದಿನಲ್ಲಿ ಐಎಂಎಫ್ನ ಸ್ಥಾನಿಕ ಪ್ರತಿನಿಧಿ ಎಸ್ತರ್ ಪೆರೆರ್ ರೂಯಿರ್ ಹೇಳಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ಖಾನ್ ಕೋರಿಕೆಯಂತೆ ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸಿದ ಬಳಿಕ ಆ ದೇಶದಲ್ಲಿ ಸಾಂವಿಧಾನಿಕ ನಿರ್ವಾತ ಪರಿಸ್ಥಿತಿ ನಿರ್ಮಾಣಗೊಂಡಿದೆ.

ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣಗೊಳ್ಳುತ್ತಿದ್ದಂತೆಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ಕರೆನ್ಸಿ ತೀವ್ರ ಅಪಮೌಲ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಐಎಂಎಫ್ ಪಾಕಿಸ್ತಾನಕ್ಕೆ ನೀಡಲುದ್ದೇಶಿಸಿದ ಆರ್ಥಿಕ ನೆರವನ್ನು ರದ್ದುಗೊಳಿಸಬಹುದು ಅಥವಾ ತಡೆಹಿಡಿಯಬಹುದು ಎಂದು ಊಹಿಸಲಾಗಿತ್ತು. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ರೂಯಿರ್, ಐಎಂಎಫ್ ಯೋಜನೆಯನ್ನು ರದ್ದುಗೊಳಿಸುವ ಪರಿಕಲ್ಪನೆಯಿಲ್ಲ. ನೂತನ ಸರಕಾರ ಅಸ್ತಿತ್ವಕ್ಕೆ ಬಂದೊಡನೆ ನೆರವು ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕಕ್ಕೆ ಅವಿಧೇಯನಾಗಿದ್ದಕ್ಕೆ ಇಮ್ರಾನ್ ಬೆಲೆ ತೆತ್ತಿದ್ದಾರೆ: ರಶ್ಯ 

ಪಾಕಿಸ್ತಾನದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವ ಮತ್ತೊಂದು ನಾಚಿಕೆಗೇಡಿನ ಪ್ರಯತ್ನವನ್ನು ಅಮೆರಿಕ ನಡೆಸಿದ್ದು, ಅಮೆರಿಕಕ್ಕೆ ಅವಿಧೇಯನಾಗಿದ್ದಕ್ಕೆ ಪ್ರಧಾನಿ ಇಮ್ರಾನ್ಖಾನ್ ಬೆಲೆ ತೆತ್ತಿದ್ದಾರೆ . ಫೆಬ್ರವರಿಯಲ್ಲಿ ಇಮ್ರಾನ್ ರಶ್ಯಕ್ಕೆ ಭೇಟಿ ನೀಡಿರುವುದಕ್ಕೆ ಅವರನ್ನು ಅಮೆರಿಕ ಶಿಕ್ಷಿಸಿದೆ ಎಂದು ರಶ್ಯ ಟೀಕಿಸಿದೆ. ಉಕ್ರೇನ್ ವಿರುದ್ಧ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ಗೆ ರಶ್ಯ ಅಧ್ಯಕ್ಷ ಪುಟಿನ್ ಆದೇಶಿಸಿದ ಫೆಬ್ರವರಿ 24ರಂದೇ ಪಾಕ್ ಪ್ರಧಾನಿ ಇಮ್ರಾನ್ಖಾನ್ ರಶ್ಯಕ್ಕೆ ಭೇಟಿ ನೀಡಿದ್ದರು. 

1999ರಲ್ಲಿ ಪಾಕ್ ಪ್ರಧಾನಿ ನವಾರ್ ಶರೀಫ್ ರಶ್ಯಕ್ಕೆ ಭೇಟಿಯಾದ ಬಳಿಕ ಪಾಕಿಸ್ತಾನದ ಪ್ರಧಾನಿ ರಶ್ಯಕ್ಕೆ ನೀಡಿದ ಪ್ರಥಮ ಭೇಟಿ ಇದಾಗಿದೆ. ರಶ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಇಮ್ರಾನ್ ಘೋಷಿಸಿದೊಡನೆ ಅಮೆರಿಕ ಹಾಗೂ ಅದರ ಪಾಶ್ಚಿಮಾತ್ಯ ಸಹಯೋಗಿಗಳು ಭೇಟಿ ರದ್ದುಗೊಳಿಸುವಂತೆ ಇಮ್ರಾನ್ ಮೇಲೆ ಭಾರೀ ಒತ್ತಡ ಹಾಕಿದ್ದವು. ತನ್ನ ಸ್ವಾರ್ಥ ಸಾಧನೆಗಾಗಿ ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಎಸಗುವ ಅಮೆರಿಕದ ಮತ್ತೊಂದು ನಾಚಿಕೆಗೇಡಿನ ಪ್ರಯತ್ನಕ್ಕೆ ಇದು ಪುರಾವೆಯಾಗಿದೆ ಎಂದು ರಶ್ಯ ವಿದೇಶಾಂಗ ಸಚಿವಾಲಯದ ವಕ್ತಾರೆ ವುರಿಯಾ ಝಕರೋವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News