ಇತರ ಉಗ್ರರಿಗಿಂತ ರಶ್ಯ ಭಿನ್ನವಲ್ಲ: ಝೆಲೆನ್ಸ್ಕಿ

Update: 2022-04-05 17:52 GMT

ಹೊಸದಿಲ್ಲಿ, ಎ.5: ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದ ಬಳಿಕ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, 2ನೇ ವಿಶ್ವಯುದ್ಧದ ನಂತರ ಉಕ್ರೇನ್ನಲ್ಲಿ ಅತ್ಯಂತ ಭಯಾನಕ ಯುದ್ಧಾಪರಾಧ ನಡೆದಿದೆ ಎಂದು ಹೇಳಿದರು.

ಬುಚದಲ್ಲಿ ರಶ್ಯನ್ ಪಡೆಯ ಕೃತ್ಯ ಇತರ ಉಗ್ರ ಸಂಘಟನೆಗಿಂತ ಭಿನ್ನವಾಗಿಲ್ಲ. ದಯೇಷ್ನಂತಹ ಉಗ್ರ ಸಂಘಟನೆ ನಡೆಸುವ ಭಯಾನಕ ಕೃತ್ಯವನ್ನು ವಿಶ್ವಸಂಸ್ಥೆ ಭದ್ರತಾ ಸಮತಿಯ ಸದಸ್ಯ ದೇಶವೊಂದು ಎಸಗಿದೆ. ಉಕ್ರೇನ್ ಕುರಿತ ಪೂರ್ಣ ಸತ್ಯದ ದರ್ಶನ ವಿಶ್ವಕ್ಕೆ ಇನ್ನಷ್ಟೇ ಆಗಬೇಕಿದೆ ಎಂದರು.

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಮಂಗಳವಾರದ ಕೆಲವು ಬೆಳವಣಿಗೆಗಳು ಹೀಗಿವೆ: ಬುಚಾದಲ್ಲಿನ ಹತ್ಯೆಯ ಹಿನ್ನೆಲೆಯಲ್ಲಿ ರಶ್ಯ ವಿರುದ್ಧ ಯುದ್ಧಾಪರಾಧದ ವಿಚಾರಣೆ ನಡೆಯಬೇಕು ಮತ್ತು ಇನ್ನಷ್ಟು ಕಠಿಣ ನಿರ್ಬಂಧ ಜಾರಿಯಾಗಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಗ್ರಹ. ಈ ಪ್ರಕರಣದ ಬಗ್ಗೆ ಪುರಾವೆ ಸಂಗ್ರಹಿಸಲು ಉಕ್ರೇನ್ಗೆ ತನಿಖಾ ತಂಡ ರವಾನಿಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿಕೆ.

ರಶ್ಯದ ತೈಲ ಮತ್ತು ಕಲ್ಲಿದ್ದಲು ಆಮದಿನ ಮೇಲೆ ನಿರ್ಬಂಧ ಜಾರಿ ಬಗ್ಗೆ ಚಿಂತನೆ ನಡೆಸಿರುವುದಾಗಿ ಯುರೋಪಿಯನ್ ಯೂನಿಯನ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನ್ನ ಬುಚ ನಗರದಲ್ಲಿ ನೂರಾರು ನಾಗರಿಕರ ಸಾವಿಗೆ ರಶ್ಯ ಸೇನೆ ಕಾರಣ ಎಂಬ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸುವುದಾಗಿ ರಶ್ಯ ಹೇಳಿದೆ. ಇದೊಂದು ಸುಳ್ಳು ಸುದ್ಧಿ. ಮೃತದೇಹಗಳ ಫೋಟೋಗಳನ್ನು ತಿರುಚಿ ಪಾಶ್ಚಾತ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಉಕ್ರೇನ್ ಮಾಡಿರುವ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ. ಮೊಟಿಝಿನ್ ಪ್ರದೇಶದಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿರುವ ಸ್ಥಿತಿಯಲ್ಲಿ 5 ನಾಗರಿಕರ ಮೃತದೇಹ ಪತ್ತೆಯಾಗಿದೆ. ಇದರಲ್ಲಿ ನಗರದ ಮೇಯರ್, ಅವರ ಪತಿ ಮತ್ತು ಮಗುವಿನ ಮೃತದೇಹವೂ ಸೇರಿದೆ. ನಾಲ್ಕು ಮೃತದೇಹಗಳನ್ನು ಕಾಡಿನ ಸಮೀಪ ಅರ್ಧದಷ್ಟು ಸಮಾಧಿ ಮಾಡಲಾಗಿದ್ದರೆ, ಮತ್ತೊಂದು ಮೃತದೇಹವನ್ನು ಬಾವಿಗೆ ಎಸೆಯಲಾಗಿತ್ತು ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ರಶ್ಯ ಪಡೆಯಿಂದ ಮುತ್ತಿಗೆಗೆ ಒಳಗಾಗಿರುವ ಮರಿಯುಪೋಲ್ನಲ್ಲಿ ಸಿಕ್ಕಿಕೊಂಡಿರುವ ಜನರಿಗೆ ನೆರವಾಗಲು ತೆರಳುತ್ತಿದ್ದ ಸಂದರ್ಭ ಬಂಧನಕ್ಕೆ ಒಳಗಾಗಿದ್ದ ತನ್ನ ಸದಸ್ಯರನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ ಎಂದು ರೆಡ್ಕ್ರಾಸ್ ಹೇಳಿದೆ. ಪೂರ್ವ ಉಕ್ರೇನ್ನ ಲುಗಾಂಸ್ಕ್ ಪ್ರದೇಶದಲ್ಲಿ ಭಾರೀ ಆಕ್ರಮಣಕ್ಕೆ ರಶ್ಯ ಸನ್ನದ್ಧವಾಗಿದೆ ಎಂದು ಸ್ಥಳೀಯ ಗವರ್ನರ್ ಸೆರ್ಗಿಯ್ ಗೈಡೆಯ್ ಹೇಳಿದ್ದಾರೆ. ರಶ್ಯದ 15 ರಾಜತಾಂತ್ರಿಕರನ್ನು ದೇಶದಿಂದ ಉಚ್ಛಾಟಿಸಿರುವುದಾಗಿ ಡೆನ್ಮಾರ್ಕ್ ಹೇಳಿಕೆ. ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಲಿಥುವೇನಿಯಾ ಕೂಡಾ ರಶ್ಯದ ರಾಜತಾಂತ್ರಿಕರನ್ನು ಉಚ್ಛಾಟಿಸುವ ಘೋಷಣೆ ಮಾಡಿದೆ. ರಶ್ಯದ ಆಕ್ರಮಣದ ಬಳಿಕ 4.2 ಮಿಲಿಯನ್ಗೂ ಅಧಿಕ ಮಂದಿ ಉಕ್ರೇನ್ನಿಂದ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆ ಹೇಳಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News