×
Ad

ಇಷ್ಟ ಬಂದಾಗ ಮಾಂಸ ತಿನ್ನಲು ಮತ್ತು ಮಾರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ: ಮಹುವಾ ಮೊಯಿತ್ರಾ

Update: 2022-04-06 10:19 IST

ಹೊಸದಿಲ್ಲಿ: ಹಿಂದೂಗಳ ಹಬ್ಬವಾದ ನವರಾತ್ರಿ ಸಂದರ್ಭದಲ್ಲಿ  ದಕ್ಷಿಣ ದಿಲ್ಲಿಯಲ್ಲಿ ಮಾಂಸದ ಅಂಗಡಿಗಳನ್ನು ತೆರೆಯುವುದಕ್ಕೆ ನಿರ್ಬಂಧ ವಿಧಿಸಿರುವ ಮೇಯರ್ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಟೀಕಿಸಿದ್ದಾರೆ.

ಭಾರತೀಯ ನಾಗರಿಕರಿಗೆ ಸಂವಿಧಾನ  ಖಾತ್ರಿಪಡಿಸಿರುವ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ ಅವರು, ತನಗೆ ಇಷ್ಟವಾದಾಗ ಮಾಂಸವನ್ನು ತಿನ್ನಲು ಹಾಗೂ  ಅಂಗಡಿಯವರಿಗೆ ಅದನ್ನು ಮಾರಾಟ ಮಾಡಲು ನಮ್ಮ ಸಂವಿಧಾನ ಅವಕಾಶ ನೀಡುತ್ತದೆ ಎಂದು ಹೇಳಿದರು.

"ನಾನು ದಕ್ಷಿಣ ದಿಲ್ಲಿಯಲ್ಲಿ ವಾಸಿಸುತ್ತಿದ್ದೇನೆ. ಸಂವಿಧಾನವು ನನಗೆ ಇಷ್ಟವಾದಾಗ ಮಾಂಸವನ್ನು ತಿನ್ನಲು ಅವಕಾಶ ನೀಡುತ್ತದೆ ಹಾಗೂ  ಅಂಗಡಿಯವನಿಗೆ ತನ್ನ ವ್ಯಾಪಾರವನ್ನು ನಡೆಸುವ ಸ್ವಾತಂತ್ರ್ಯವನ್ನು  ನೀಡಿದೆ’’ ಎಂದು  ಇಂದು ಬೆಳಿಗ್ಗೆ ಮೊಯಿತ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದಕ್ಷಿಣ ದಿಲ್ಲಿಯ ವ್ಯಾಪ್ತಿಯಲ್ಲಿರುವ   ಮಾಂಸದ ಅಂಗಡಿಗಳನ್ನು ನವರಾತ್ರಿಯ ಸಮಯದಲ್ಲಿ  ಮುಚ್ಚಬೇಕು ಎಂದು ಎಂದು ಸೋಮವಾರ ದಕ್ಷಿಣ ದಿಲ್ಲಿಯ ಮೇಯರ್ ಮುಖೇಶ್ ಸೂರ್ಯನ್ ಆದೇಶಿಸಿದ್ದರು. ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಭಕ್ತರು ಮಾಂಸ, ಈರುಳ್ಳಿ ಹಾಗೂ  ಬೆಳ್ಳುಳ್ಳಿ ತಿನ್ನುವುದಿಲ್ಲ.  ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಹಾಗೂ  ಇದು ಯಾರ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಿಲ್ಲ ಎಂದು ಮುಖೇಶ್ ಸೂರ್ಯನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News