×
Ad

ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜಸ್ಥಾನದಿಂದ ದಿಲ್ಲಿಗೆ 350 ಕಿ.ಮೀ. ಓಡಿಕೊಂಡೇ ಬಂದ ಸೇನಾ ಆಕಾಂಕ್ಷಿ

Update: 2022-04-06 11:49 IST

ಹೊಸದಿಲ್ಲಿ: ಸೇನಾ ನೇಮಕಾತಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಸೇನಾ  ಆಕಾಂಕ್ಷಿಗಳು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಭಾರತೀಯ ಸೇನೆಗೆ ಸೇರಲು ಬಯಸಿರುವ ಯುವಕನೊಬ್ಬ ಕೈಯ್ಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ರಾಜಸ್ಥಾನದಿಂದ ಹೊಸದಿಲ್ಲಿಗೆ 350 ಕಿ.ಮೀ ದೂರ ಓಡಿಕೊಂಡೇ ಬಂದು  ಎಲ್ಲರ ಗಮನ ಸೆಳೆದಿದ್ದಾರೆ. ನೇಮಕಾತಿ ಪರೀಕ್ಷೆಯ ಮುಂದೂಡಿಕೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು  ಬಯಸಿದ್ದಾರೆ.

ರಾಜಸ್ಥಾನದ ನಗೌರ್ ಜಿಲ್ಲೆಯ 24 ವರ್ಷದ ಸುರೇಶ್ ಭಿಚಾರ್  ಸಿಕಾರ್‌ನಿಂದ ಹೊಸದಿಲ್ಲಿಗೆ 350 ಕಿ.ಮೀ. ದೂರವನ್ನು ಸ್ಥಿರವಾದ ಓಟದ ಮೂಲಕ 50 ಗಂಟೆಗಳಲ್ಲಿ ಕ್ರಮಿಸಿದ್ದಾರೆ.

"ನಾನು ಭಾರತೀಯ ಸೇನೆಗೆ ಸೇರಲು ಉತ್ಸುಕನಾಗಿದ್ದೇನೆ. ಆದರೆ ಕಳೆದ 2 ವರ್ಷಗಳಿಂದ ನೇಮಕಾತಿ ನಡೆಯುತ್ತಿಲ್ಲ. ನಾಗೌರ್, ಸಿಕಾರ್‌ ಮತ್ತು ಜುಂಜುನು ಜಿಲ್ಲೆಯ  ಯುವಕರ ವಯಸ್ಸು ಹೆಚ್ಚಾಗುತ್ತಿದೆ  ನಮ್ಮ ದೇಶದ ಯುವಕರ ಉತ್ಸಾಹವನ್ನು ಹೆಚ್ಚಿಸಲು ನಾನು ದಿಲ್ಲಿಗೆ ಓಡಿಕೊಂಡು  ಬಂದಿದ್ದೇನೆ" ಎಂದು ಸುರೇಶ್ ಭಿಚಾರ್  ಹೇಳಿದರು.

ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದ ವಿರುದ್ಧ ಪ್ರತಿಭಟಿಸಲು ಮಂಗಳವಾರ ಜಂತರ್ ಮಂತರ್‌ನಲ್ಲಿ ಸಾವಿರಾರು  ಸೇನಾ ಅಭ್ಯರ್ಥಿಗಳು ಜಮಾಯಿಸಿದ್ದರು.  ಸುರೇಶ್ ಭಿಚಾರ್ ಅವರು ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಯೋಜಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸೇನೆ, ವಾಯುಸೇನೆ ಹಾಗೂ  ನೌಕಾಪಡೆಯಲ್ಲಿ ಅಧಿಕಾರಿಯೇತರ ಹುದ್ದೆಗಳಿಗೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ.  ಇದು ಅನೇಕ ಸೇನಾ ಆಕಾಂಕ್ಷಿಗಳ ವೃತ್ತಿಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಹಲವಾರು ಪ್ರತಿಭಟನಾಕಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News