"ಇದು ಅನ್ಯಾಯ‌" :ಮಿತ್ರಪಕ್ಷದ ವಿರುದ್ಧ ತನಿಖೆಯನ್ನು ಪ್ರಧಾನಿ ಮೋದಿ ಬಳಿ ಪ್ರಸ್ತಾವಿಸಿದ ಶರದ ಪವಾರ್

Update: 2022-04-06 17:28 GMT
photo courtesy :twitter

ಹೊಸದಿಲ್ಲಿ,ಎ.6: ಎನ್ಸಿಪಿ ಮುಖ್ಯಸ್ಥ ಶರದ ಪವಾರ್ ಅವರು ಬುಧವಾರ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಿಜೆಪಿಯನ್ನು ಕಟುವಾಗಿ ವಿರೋಧಿಸುತ್ತಿರುವ ಮಹಾರಾಷ್ಟ್ರದಲ್ಲಿಯ ಆಡಳಿತಾರೂಢ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ನಾಯಕರು ಮತ್ತು ಇತರ ರಾಜಕಾರಣಿಗಳ ವಿರುದ್ಧ ತನಿಖಾ ಸಂಸ್ಥೆಗಳ ಕ್ರಮಗಳನ್ನು ಪ್ರಸ್ತಾವಿಸಿದರು.

ಉಭಯ ನಾಯಕರು ಸಂಸತ್ತಿನಲ್ಲಿಯ ಪ್ರಧಾನಿ ಕಚೇರಿಯಲ್ಲಿ ಸುಮಾರು 20 ನಿಮಿಷಗಳ ಕಾಲ ಮಾತುಕತೆಗಳನ್ನು ನಡೆಸಿದರು.
ಭೂವ್ಯವಹಾರಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಮಂಗಳವಾರ ಶಿವಸೇನೆ ನಾಯಕ ಸಂಜಯ ರಾವುತ್ ಪತ್ನಿ ವರ್ಷಾ ರಾವುತ್ ಮತ್ತು ಆಪ್ ನಾಯಕ ಹಾಗೂ ದಿಲ್ಲಿ ಸಚಿವ ಸತ್ಯೇಂದ್ರ ಜೈನ ಅವರ ಸಂಬಂಧಿಯ ಆಸ್ತಿಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಮೋದಿ-ಪವಾರ್ ಭೇಟಿ ನಡೆದಿದೆ.

ಯಾವ ಆಧಾರದ ಮೇಲೆ ರಾವುತ್ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ? ಇದು ಅನ್ಯಾಯ. ರಾವುತ್ ವಿರುದ್ಧ ಕ್ರಮಕ್ಕೆ ಪ್ರಚೋದನೆ ಏನು? ಅವರು ಕೆಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಏಕಮಾತ್ರ ಕಾರಣವೇ ಎಂದು ತಾನು ಪ್ರಧಾನಿಯನ್ನು ಪ್ರಶ್ನಿಸಿದ್ದಾಗಿ ಪವಾರ್ ಸುದ್ದಿಗಾರರಿಗೆ ತಿಳಿಸಿದರು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಮಹಾ ವಿಕಾಸ ಅಘಾಡಿಯಲ್ಲಿ ಯಾವುದೇ ಪ್ರಕ್ಷುಬ್ಧತೆಯ ಮಾತುಗಳನ್ನು ತಳ್ಳಿಹಾಕಿದ ಪವಾರ್,‘ಮುಂದಿನ ಚುನಾವಣೆಯಲ್ಲಿ ನಾವು ಒಟ್ಟಾಗಿ ಹೋರಾಡುತ್ತೇವೆ. ಮೈತ್ರಿಕೂಟ ಸ್ಥಿರವಾಗಿದೆ. ಕಳೆದ ಎರಡೂವರೆ ವರ್ಷಗಳಿಂದಲೂ ಈ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತಿದ್ದೇನೆ ’ ಎಂದರು.
ರಾಷ್ಟ್ರಪತಿ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಪ್ರಧಾನಿ ದೇಶದ ಅತ್ಯಂತ ಹಿರಿಯ ಪ್ರತಿಪಕ್ಷ ನಾಯಕರಲ್ಲೋರ್ವರನ್ನು ಭೇಟಿಯಾಗಿರುವುದು ಸಹ ಮಹತ್ವ ಪಡೆದುಕೊಂಡಿದೆ.
 ದೇಶವನ್ನು 10 ವರ್ಷಗಳ ಕಾಲ ಆಳಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಅನ್ನು ಮುನ್ನಡೆಸಲು ತಾನು ಸಿದ್ಧನಿಲ್ಲ ಎಂದು ಪವಾರ್ ಪುನರುಚ್ಚರಿಸಿದರು. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆಯಾಗಿದ್ದಾರೆ.

ಪಕ್ಷವನ್ನು ಪುನರುಜ್ಜೀವನಗೊಳಿಸಲು ಕಾಂಗ್ರೆಸ್ಗೆ ತನ್ನ ವಾಪಸಾತಿಯ ಸಾಧ್ಯತೆಯ ಕುರಿತು ಪ್ರಶ್ನೆಗಳನ್ನು ತಳ್ಳಿಹಾಕಿದ ಅವರು,ಕಾಂಗ್ರೆಸ್ನಲ್ಲಿಯ ಭಿನ್ನಮತೀಯರು ಪಕ್ಷವನ್ನು ಇನ್ನಷ್ಟು ಬಲಗೊಳಿಸುವಂತೆ ಕೇಳುತ್ತಿದ್ದಾರೆ ಎಂದರು. ವಿಧಾನ ಪರಿಷತ್ತಿಗೆ ನಾಮಕರಣಕ್ಕಾಗಿ 12 ಹೆಸರುಗಳ ಪಟ್ಟಿ ಮಹಾರಾಷ್ಟ್ರ ರಾಜ್ಯಪಾಲರ ಅಂಗೀಕಾರಕ್ಕಾಗಿ ಎರಡು ವರ್ಷಕ್ಕೂ ಹೆಚ್ಚಿನ ಸಮಯದಿಂದ ಬಾಕಿಯಿದ್ದು,ಈ ಬಗ್ಗೆಯೂ ತಾನು ಪ್ರಧಾನಿ ಜೊತೆ ಚರ್ಚಿಸಿದ್ದಾಗಿ ಪವಾರ್ ತಿಳಿಸಿದರು.
ಪವಾರ್ ಮಂಗಳವಾರ ಸಂಜೆ ತನ್ನ ನಿವಾಸದಲ್ಲಿ ಮಹಾರಾಷ್ಟ್ರದ ಶಾಸಕರು ಮತ್ತು ನಾಯಕರ ಸಭೆಯನ್ನು ಕರೆದಿದ್ದರು. ಆಡಳಿತ ಮೈತ್ರಿಕೂಟದ ಶಾಸಕರ ಜೊತೆಗೆ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.
ಮಹಾರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಭೆಯನ್ನು ಕರೆಯಲಾಗಿತ್ತು ಎಂದು ಎನ್ಸಿಪಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News