ತಂದೆಯ ಆಸ್ತಿಯನ್ನು ಮಕ್ಕಳು ಅಡಗಿಸಿದ್ದಾರೆಂಬ ಶಂಕೆ: ಪುಟಿನ್ ಪುತ್ರಿಯರನ್ನು ಗುರಿ ಮಾಡುತ್ತಿರುವ ಅಮೆರಿಕ

Update: 2022-04-07 06:21 GMT
ವ್ಲಾದಿಮಿರ್ ಪುಟಿನ್ (PTI)

ವಾಷಿಂಗ್ಟನ್: ಉಕ್ರೇನ್ ಮೇಲೆ ಆಕ್ರಮಣಗೈದಿರುವ ರಷ್ಯಾ ಮೇಲೆ ಈಗಾಗಲೇ ಹಲವು ನಿರ್ಬಂಧಗಳನ್ನು ವಿಧಿಸಿರುವ ಅಮೆರಿಕ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇಬ್ಬರು ಪುತ್ರಿಯರನ್ನು ಗುರಿ ಮಾಡಲು ಹೊರಟಿದೆ. ಪುಟಿನ್ ಪುತ್ರಿಯರಾದ ಕೆಟರಿನಾ ಮತ್ತು ಮರಿಯಾ ಇಬ್ಬರೂ ಪುಟಿನ್  ಅವರ ಸಂಪತ್ತನ್ನು ಅಡಗಿಸಿದ್ದಾರೆಂಬ ಆರೋಪವಿದೆ.

ಪುಟಿನ್ ಪುತ್ರಿ ಕೆಟರಿನಾ ವ್ಲಾದಿಮಿರೋವ್ನಾ ಟಿಖೊನೋವಾ ಅವರು ಟೆಕ್ ಎಕ್ಸಿಕ್ಯುಟಿವ್ ಆಗಿದ್ದು ಆಕೆಯ ಕೆಲಸ ರಷ್ಯಾದ ಸರಕಾರ ಮತ್ತದರ ರಕ್ಷಣಾ ಕ್ಷೇತ್ರವನ್ನು ಬೆಂಬಲಿಸುತ್ತಿದೆ ಎಂದು  ಬುಧವಾರ ಅಮೆರಿಕಾ ಘೋಷಿಸಿದ ಹೊಸ ನಿರ್ಬಂಧಗಳ ಪ್ಯಾಕೇಜ್‍ನಲ್ಲಿ ಉಲ್ಲೇಖಿಸಲಾಗಿದೆ.

ಪುಟಿನ್ ಅವರ ಇನ್ನೋರ್ವ ಪುತ್ರಿ ಮರಿಯಾ ವ್ಲಾದಿಮಿರೋವ್ನ ವೊರೊಂಟ್ಸಾವ ಅವರು ಸರಕಾರಿ ಅನುದಾನಿತ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದು ಜೆನೆಟಿಕ್ಸ್ ಸಂಶೋಧನೆಗೆಂದು ರಷ್ಯಾ ಸರಕಾರದಿಂದ ಬಿಲಿಯಗಟ್ಟಲೆ ಡಾಲರ್ ಅನುದಾನ ಪಡೆದಿದ್ದಾರೆನ್ನಲಾಗಿದ್ದು ಈ ಸಂಬಂಧ ಎಲ್ಲವನ್ನೂ ಪುಟಿನ್ ಅವರೇ ವೈಯಕ್ತಿಕವಾಗಿ ನಿಭಾಯಿಸುತ್ತಿದ್ದಾರೆಂದು ಅಮೆರಿಕಾ ಹೇಳಿದೆ.

"ಪುಟಿನ್ ಅವರ ಬಹಳಷ್ಟು ಸಂಪತ್ತನ್ನು ಅವರ ಕುಟುಂಬ ಸದಸ್ಯರಲ್ಲಿ ಅಡಗಿಸಲಾಗಿದೆ, ಇದೇ ಕಾರಣಕ್ಕೆ ನಾವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೇವೆ,'' ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪುಟಿನ್ ಅವರ ಇಬ್ಬರು ಪುತ್ರಿಯರು ಯಾವತ್ತೂ ಪುಟಿನ್ ತಮ್ಮ ತಂದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ ಹಾಗೂ ಪುಟಿನ್ ಕೂಡ ಪುತ್ರಿಯರ ಬಗ್ಗೆ ಏನನ್ನೂ ಹೇಳಲು ನಿರಾಕರಿಸಿದ್ದಾರೆ.

ಇಪ್ಪತ್ತೊಂಬತ್ತು ವರ್ಷದ ಕೆಟರಿನಾ ಅವರು ಪುಟಿನ್ ಅವರ ದೀರ್ಘಕಾಲದ ಸ್ನೇಹಿತ ನಿಕೊಲಾಯಿ ಶಮಲೋವ್ ಅವರ ಪುತ್ರ ಕಿರಿಲ್ ಶಮಲೋವ್ ಅವರ ಪತ್ನಿ ತಾವೆಂದು ತಮ್ಮನ್ನು ಬಣ್ಣಿಸಿದ್ದಾರೆ. ಇಬ್ಬರ ಬಳಿಯೂ 2 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ಕಾರ್ಪೊರೇಟ್ ಹೋಲ್ಡಿಂಗ್ಸ್ ಇವೆಯೆನ್ನಲಾಗಿದೆ.

ಪುಟಿನ್ ಅವರ ಹಿರಿಯ ಪುತ್ರಿ ಮರಿಯಾ ಮಾಸ್ಕೋ ಸ್ಟೇಟ್ ವಿವಿಯಿಂದ ವೈದ್ಯಕೀಯ ಪದವಿ ಪಡೆದಿದ್ದು ಆಕೆ ಡಚ್ ಉದ್ಯಮಿ ಜೊರ್ರಿಟಿ ಜೂಸ್ಟ್ ಫಾಸ್ಸೆನ್ ಅವರನ್ನು ವಿವಾಹವಾಗಿದ್ದಾರೆ. ಪುಟಿನ್ ಅವರ ಸಮೀಪವರ್ತಿಗಳಿಗೆ ನಿಕಟ ನಂಟು ಹೊಂದಿರುವ ಗಝ್ಪೊಂಬ್ಯಾಂಕ್‍ಗಾಗಿ ಮರಿಯಾ ಅವರ ಪತಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬುಧವಾರ ಅಮೆರಿಕಾ ಹೇರಿದ ನಿರ್ಬಂಧಗಳು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೇಯಿ ಲವ್ರೋವ್ ಅವರ ಪತ್ನಿ ಹಾಗೂ ಪುತ್ರಿಯನ್ನು ಟಾರ್ಗೆಟ್ ಮಾಡಿದೆ. ಅಮೆರಿಕನ್ನರು ರಷ್ಯಾದಲ್ಲಿ ಹೂಡಿಕೆ ಮಾಡುವುದಕ್ಕೂ ನಿಷೇಧ ಹೇರಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News