ಸ್ಕಾರ್ಫ್ ಧರಿಸುವ ಮುಸ್ಲಿಮರಿಗೆ ದಂಡ: ಫ್ರಾನ್ಸ್‌ನ ಅಧ್ಯಕ್ಷೀಯ ಅಭ್ಯರ್ಥಿಯ ಘೋಷಣೆ

Update: 2022-04-07 17:43 GMT

ಪ್ಯಾರಿಸ್, ಎ.7: ಸಾರ್ವಜನಿಕ ಸ್ಥಳದಲ್ಲಿ ಸ್ಕಾರ್ಫ್ ಧರಿಸುವ ಮುಸ್ಲಿಮರಿಗೆ ದಂಡ ವಿಧಿಸುವುದಾಗಿ ಫ್ರಾನ್ಸ್‌ನ ಕಟ್ಟಾ ಬಲಪಂಥೀಯ ಅಧ್ಯಕ್ಷಿಯ ಅಭ್ಯರ್ಥಿ ಮರೀನ್ ಲೆ ಪೆನ್ ಗುರುವಾರ ಅಂತಿಮ ಹಂತದ ಚುನಾವಣಾ ಪ್ರಚಾರದ ಸಂದರ್ಭ ಘೋಷಿಸಿದ್ದಾರೆ.

ರವಿವಾರ ನಡೆಯುವ ಪ್ರಥಮ ಹಂತದ ಮತದಾನದಲ್ಲಿ ಹಾಲಿ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ತನ್ನ ಪ್ರತಿಸ್ಪರ್ಧಿಯ ಎದುರು ಭರ್ಜರಿ ಮುನ್ನಡೆ ಸಾಧಿಸುವ ನಿರೀಕ್ಷೆಯಿದ್ದರೂ, ಎಪ್ರಿಲ್ 24ರಂದು ನಡೆಯುವ ದ್ವಿತೀಯ ಹಂತದ ಮತದಾನದಲ್ಲಿ ಈ ಹಿನ್ನಡೆಯನ್ನು ಮೀರಿ ನಿಲ್ಲುವ ಅಂತಿಮ ಪ್ರಯತ್ನವನ್ನು ಮರೀನ್ ಮಾಡುತ್ತಿದ್ದಾರೆ. ಕಟ್ಟಾ ಎಡಪಂಥೀಯ ಅಭ್ಯರ್ಥಿ ಜೀನ್ ಲೂಕ್ ಮೆಲೆಂಚನ್ ಅಧ್ಯಕ್ಷ ಹುದ್ದೆಗೆ ಮತ್ತೊಬ್ಬ ಹುರಿಯಾಳಾಗಿದ್ದಾರೆ.

ಆರ್‌ಟಿಎಲ್ ರೇಡಿಯೊದ ವರದಿಗಾರರ ಜತೆ ಮಾತನಾಡಿದ ಮರೀನ್, ಕಾರಿನಲ್ಲಿ ಸೀಟು ಬೆಲ್ಟ್ ಧರಿಸದವರಿಗೆ ದಂಡ ವಿಧಿಸುವ ರೀತಿಯಲ್ಲಿಯೇ ಸಾರ್ವಜನಿಕವಾಗಿ ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಲಾಗುವುದು ಮತ್ತು ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಈ ನಿಯಮ ಜಾರಿಗೆ ಪೊಲೀಸರಿಗೆ ಸಮಸ್ಯೆಯಾಗದು ಎಂದರು.

ತಾನು ಪ್ರಸ್ತಾವಿಸಿರುವ ಹಲವು ಕಾನೂನುಗಳು ತಾರತಮ್ಯದ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯ ಕ್ರಮ ಎಂದು ಸಾಂವಿಧಾನಿಕ ಸವಾಲು ಎದುರಾಗುವುದನ್ನು ತಪ್ಪಿಸಲು ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದವರು ಹೇಳಿದ್ದಾರೆ. ಫ್ರಾನ್ಸ್‌ನ ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆ ಅಥವಾ ಸಂಕೇತಗಳನ್ನು, ಸಾರ್ವಜನಿಕ ಸ್ಥಳಗಳಲ್ಲಿ ಮುಖದ ಪೂರ್ಣ ಹೊದಿಕೆಯನ್ನು ನಿಷೇಧಿಸುವ ಕಾನೂನನ್ನು ಎಲ್ಲಾ ನಾಗರಿಕರಿಗೆ ಮತ್ತು ನಿರ್ಧಿಷ್ಟ ಸ್ಥಳಗಳಲ್ಲಿ ಅನ್ವಯಿಸುವ ಆಧಾರದಲ್ಲಿ ಜಾರಿಯಲ್ಲಿದೆ.

53 ವರ್ಷದ ಮರಿನ್ ಲೆ ಪೆನ್, ತನ್ನ ವಲಸೆ ವಿರೋಧಿ ನಿಲುವಿಗೆ ಈ ಬಾರಿ ಹೆಚ್ಚು ಅಂಟಿಕೊಳ್ಳದೆ ಕುಟುಂಬದ ಖರ್ಚಿನ ವಿಷಯವನ್ನು ಪ್ರಚಾರಕ್ಕೆ ಬಳಸಿಕೊಂಡಿರುವುದರಿಂದ ಅಧ್ಯಕ್ಷ ಗಾದಿಗೆ ಈ ಹಿಂದಿಗಿಂತಲೂ ಹೆಚ್ಚು ನಿಕಟವಾಗಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ರವಿವಾರ ನಡೆಯಲಿರುವ ಪ್ರಥಮ ಹಂತದ ಮತದಾನದಲ್ಲಿ ಹಾಲಿ ಅಧ್ಯಕ್ಷ ಮಾಕ್ರನ್ ನಿಕಟ ಪ್ರತಿಸ್ಪರ್ಧಿ ಮರೀನ್ ಎದುರು 54%-44% ಅಂತರದ ಮುನ್ನಡೆ ಸಾಧಿಸಬಹುದು ಎಂದು ಮತದಾನ ಪೂರ್ವ ಸಮೀಕ್ಷೆಗಳು ಹೇಳಿವೆ. ಉಕ್ರೇನ್‌ನ ಯುದ್ಧ, ಕೋವಿಡ್ ಸೋಂಕಿನ ನಿರ್ವಹಣೆ, ಹಣದುಬ್ಬರ, ಆದಾಯ ಮುಂತಾದ ವಿಷಯಗಳು ಈ ಬಾರಿ ಫ್ರಾನ್ಸ್ ಚುನಾವಣೆಯ ಅಜೆಂಡಾಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News