ಹಿಂಜರಿಕೆ ಬಿಡಿ, ಆಯುಧ ಪೂರೈಸಿ: ನೇಟೊ ಸದಸ್ಯರಿಗೆ ಉಕ್ರೇನ್ ಆಗ್ರಹ

Update: 2022-04-07 18:31 GMT

ಬ್ರಸೆಲ್ಸ್, ಎ.7: ರಶ್ಯದ ಆಕ್ರಮಣಕಾರಿ ಪಡೆಯ ಎದುರು ಹೋರಾಡಲು ಉಕ್ರೇನ್‌ಗೆ ಅಗತ್ಯವಿರುವ ಆಧುನಿಕ ಶಸ್ತ್ರಾಸ್ತ್ರಗಳನ್ನು ತಕ್ಷಣ ಪೂರೈಸುವಂತೆ ನೇಟೊ ಸದಸ್ಯರನ್ನು ಉಕ್ರೇನ್ ಆಗ್ರಹಿಸಿದೆ.

ಬ್ರಸೆಲ್ಸ್‌ನಲ್ಲಿ ಗುರುವಾರ ನಡೆದ ನೇಟೊ ವಿದೇಶಾಂಗ ಸಚಿವರ ಮಟ್ಟದ ಸಭೆಗೂ ಮುನ್ನ ಸುದ್ಧಿಗಾರರ ಜತೆ ಮಾತನಾಡಿದ ಉಕ್ರೇನ್ ವಿದೇಶ ಸಚಿವ ಡಿಮಿಟ್ರೊ ಕ್ಯುಲೆಬಾ, ಸಭೆಯಲ್ಲಿ ನಮ್ಮ ಅಜೆಂಡಾ ಕೇವಲ 3 ವಸ್ತುಗಳಿಗೆ ಸಂಬಂಧಿಸಿರುತ್ತದೆ. ಆಯುಧ, ಆಯುಧ ಮತ್ತು ಆಯುಧ ಎಂದು ಹೇಳಿದರು.

ನಿಮ್ಮ ಹಿಂಜರಿಕೆ, ಅನುಮಾನ ಬಿಟ್ಟುಬಿಡಿ. ಉಕ್ರೇನ್‌ಗೆ ಅಗತ್ಯವಿರುವುದನ್ನು ಪೂರೈಸಿ ಎಂದು ನೇಟೊ ಸದಸ್ಯರನ್ನು ಆಗ್ರಹಿಸಿದ ಅವರು, ಆಕ್ರಮಣಕಾರಿ ಶಸ್ತ್ರಾಸ್ತ್ರ ಪೂರೈಸಲು ನೇಟೊ ಮಿತ್ರರಾಷ್ಟ್ರಗಳು ಹಿಂದೆಮುಂದೆ ನೋಡುತ್ತಿದೆ. ಆರ್ಥಿಕ ಬಲಾಢ್ಯ ಜರ್ಮನಿ ಇನ್ನೂ ಹೆಚ್ಚಿನದನ್ನು ಮಾಡಲು ಸಾಧ್ಯವಿದೆ. ನನ್ನ ದೇಶದಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ರಕ್ಷಣಾತ್ಮಕ, ಆಕ್ರಮಣಕಾರಿ ಪದಗಳ ನಡುವಿನ ವ್ಯತ್ಯಾಸಕ್ಕೆ ಯಾವುದೇ ಅರ್ಥವಿಲ್ಲ ಎಂದರು. ಉಕ್ರೇನ್‌ಗೆ ರಕ್ಷಣಾತ್ಮಕ ಆಯುಧಗಳನ್ನು ಒದಗಿಸುತ್ತೇವೆ, ಆದರೆ ಆಕ್ರಮಣಕಾರಿ ಆಯುಧ ಪೂರೈಸುವ ಸ್ಥಿತಿಯಲ್ಲಿಲ್ಲ ಎಂದು ಹೇಳುವ ದೇಶಗಳು ಬೂಟಾಟಿಕೆ ತೋರುತ್ತಿವೆ. ಇದು ಅನ್ಯಾಯದ, ನ್ಯಾಯಸಮ್ಮತವಲ್ಲದ ವಿಧಾನವಾಗಿದೆ.

ನೀವು ಆಯುಧ ಪೂರೈಸಿ, ನಾವು ನಮ್ಮ ಪ್ರಾಣವನ್ನು ಬಲಿದಾನ ನೀಡುತ್ತೇವೆ ಮತ್ತು ಯುದ್ಧ ಉಕ್ರೇನ್‌ನಲ್ಲಿಯೇ ಸೀಮಿತಗೊಳ್ಳಲಿದೆ ಎಂಬ ಉಕ್ರೇನ್ ಪ್ರಸ್ತಾವಿಸಿರುವ ವ್ಯವಹಾರ ನ್ಯಾಯಸಮ್ಮತವಾಗಿದೆ ಎಂದು ಕ್ಯುಲೆಬಾ ಹೇಳಿದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮಧ್ಯಪ್ರವೇಶಿಸಲು ಮತ್ತು ತನ್ನ ಸೇನೆಯನ್ನು ರವಾನಿಸಲು ನೇಟೊ ನಿರಾಕರಿಸಿದೆ. ಆದರೆ ಉಕ್ರೇನ್‌ಗೆ ಟ್ಯಾಂಕ್ ನಿರೋಧಕ, ಕ್ಷಿಪಣಿ ನಿರೋಧಕ ಪ್ರಮುಖ ಆಯುಧಗಳನ್ನು ಪೂರೈಸುತ್ತಿದೆ. ವಾಯುರಕ್ಷಣಾ ವ್ಯವಸ್ಥೆ, ಫಿರಂಗಿ, ಜೆಟ್ ವಿಮಾನ, ಶಸ್ತ್ರಸಜ್ಜಿತ ವಾಹನಗಳನ್ನು ಒದಗಿಸುವಂತೆ ಉಕ್ರೇನ್ ಆಗ್ರಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News