ನ್ಯಾಯಾಧೀಶರನ್ನು ಸರಕಾರವೇ ನಿಂದಿಸುವುದು ಹೊಸ ಟ್ರೆಂಡ್‌ ಆಗಿದೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ

Update: 2022-04-08 14:10 GMT

ಹೊಸದಿಲ್ಲಿ: "ಇದೀಗ ಹೊಸ ಟ್ರೆಂಡ್ ಪ್ರಾರಂಭವಾಗಿದೆ, ಸರ್ಕಾರವು ನ್ಯಾಯಾಧೀಶರನ್ನು ನಿಂದಿಸಲು ಪ್ರಾರಂಭಿಸಿದೆ. ಇದು ದುರದೃಷ್ಟಕರ" ಎಂದು ಭಾರತದ ಸುಪ್ರೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ‌ ಎನ್.ವಿ ರಮಣ ಶುಕ್ರವಾರ ಟೀಕಿಸಿದರು.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಐಆರ್‌ಎಸ್ ಅಧಿಕಾರಿ ಅಮನ್ ಕುಮಾರ್ ಸಿಂಗ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಛತ್ತೀಸ್‌ಗಢ ರಾಜ್ಯ ಸಲ್ಲಿಸಿರುವ ಎರಡು ವಿಶೇಷ ರಜೆ ಅರ್ಜಿಗಳನ್ನು ಪರಿಗಣಿಸುವಾಗ ಸಿಜೆಐ ಈ ಹೇಳಿಕೆ ನೀಡಿದ್ದಾರೆ.

ಓರ್ವ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ ಅವರು, ಎಫ್‌ಐಆರ್ ರದ್ದುಗೊಳಿಸಲು ನೀಡಿರುವ ಕಾರಣವು ಸಂಭವನೀಯತೆಯ ಆಧಾರದ ಮೇಲಿನ ಆರೋಪವಾಗಿದೆ. ದೂರು ನೀಡಲಾಗಿದ್ದು, ಪ್ರಾಥಮಿಕ ವಿಚಾರಣೆ ಹಂತದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

"ನೀವು ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಂಡರೂ ಪರವಾಗಿಲ್ಲ. ಆದರೆ ನ್ಯಾಯಾಲಯಗಳನ್ನು ನಿಂದಿಸಲು ಪ್ರಯತ್ನಿಸಬೇಡಿ. ನಾನು ಈ ನ್ಯಾಯಾಲಯಗಳಲ್ಲಿಯೂ ಈಗ ನೋಡುತ್ತಿದ್ದೇನೆ, ಇದು ಹೊಸ ಪ್ರವೃತ್ತಿಯಾಗಿದೆ. ನಾವು ಪ್ರತಿದಿನ ನೋಡುತ್ತಿದ್ದೇವೆ. ನೀವು ಹಿರಿಯ ವಕೀಲರು, ನೀವು ನಮಗಿಂತ ಹೆಚ್ಚಾಗಿ ಈ ವಿಚಾರಗಳನ್ನು ನೋಡಿದ್ದೀರಿ. ಇದೊಂದು ಹೊಸ ಟ್ರೆಂಡ್, ಸರ್ಕಾರ ನ್ಯಾಯಮೂರ್ತಿಗಳನ್ನು ನಿಂದಿಸಲು ಆರಂಭಿಸಿದೆ, ಇದು ದುರದೃಷ್ಟಕರ" ಎಂದು ಸಿಜೆಐ ಹೇಳಿದರು.

ಸಿಜೆಐ ಎನ್‌ವಿ ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಎಫ್‌ಐಆರ್ ಅನ್ನು ರಾಜ್ಯ ತನಿಖೆಗೆ ಅನುಗುಣವಾಗಿ ರದ್ದುಗೊಳಿಸಿದ ಛತ್ತೀಸ್‌ಗಢ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಉಚ್ಚಿತ್ ಶರ್ಮಾ ಸಲ್ಲಿಸಿದ ವಿಶೇಷ ರಜೆ ಅರ್ಜಿಯನ್ನು ಪರಿಗಣಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News