ಆಡಳಿತ ಸುಧಾರಣೆಯಾಗದಿದ್ದರೆ ಅವಿಶ್ವಾಸ ನಿರ್ಣಯ: ಶ್ರೀಲಂಕಾ ವಿಪಕ್ಷಗಳ ಎಚ್ಚರಿಕೆ

Update: 2022-04-08 18:23 GMT
PHOTO COURTESY:TWITTER/@Reuters

ಕೊಲಂಬೊ, ಎ.8: ದೇಶದಲ್ಲಿ ಪತನದ ಅಂಚಿನಲ್ಲಿರುವ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡುವ ಸೂಕ್ತ ಕ್ರಮಗಳನ್ನು ತಕ್ಷಣ ಕೈಗೊಂಡು ಆಡಳಿತದಲ್ಲಿ ಸುಧಾರಣೆಯಾಗದಿದ್ದರೆ ಸರಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಶ್ರೀಲಂಕಾದ ವಿಪಕ್ಷಗಳು ಶುಕ್ರವಾರ ಹೇಳಿವೆ. ಸಂಸತ್ತಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿದ ಸಮಾಗಿ ಜನ ಬಾಲವೆಗಯ ಪಕ್ಷದ ಮುಖಂಡ ಸಜಿತ್ ಪ್ರೇಮದಾಸ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವತ್ತ ಮತ್ತು ಆಡಳಿತ ಸುಧಾರಣೆಯತ್ತ ಸರಕಾರ ಗಮನ ಹರಿಸಬೇಕು. ಇಲ್ಲದಿದ್ದರೆ ನಾವು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದರು. ಅವ್ಯಸ್ಥಿತ ಸಾಲದ ಮರುಪಾವತಿಯಾಗದೆ ಡಿಫಾಲ್ಟ್ ಆಗುವುದನ್ನು ಸರಕಾರ ತಪ್ಪಿಸಲೇಬೇಕು. ಸಾಲವನ್ನು ಅಮಾನತುಗೊಳಿಸಲು ಮತ್ತು ಸಾಲವನ್ನು ಪುನರ್ರಚಿಸುವ ಪ್ರಕ್ರಿಯೆ ಆರಂಭಿಸಲು ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಳ್ಳಬೇಕು ಎಂದು ಪ್ರೇಮದಾಸ ಆಗ್ರಹಿಸಿದರು. ದೇಶದಲ್ಲಿ ವಿದೇಶಿ ವಿನಿಮಯದ ಸಂಗ್ರಹ ಅತ್ಯಲ್ಪ ಪ್ರಮಾಣಕ್ಕೆ ಕುಸಿದಿರುವುದರಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಸರಕಾರದ ಬಳಿ ಹಣವಿಲ್ಲ. ಜತೆಗೆ ಹಲವು ಬಿಲಿಯನ್ ಡಾಲರ್ ಅಂತರಾಷ್ಟ್ರೀಯ ಸಾಲದ ಮರುಪಾವತಿ ಬಾಕಿಯಿದೆ. ತೈಲ, ಔಷಧ, ಆಹಾರ ವಸ್ತು, ಪೇಪರ್, ಹೀಗೆ ಪ್ರತಿಯೊಂದು ಪದಾರ್ಥಗಳ ಕೊರತೆಯ ಸಮಸ್ಯೆಯ ಜತೆಗೆ ಬೆಲೆಯೇರಿಕೆ, ಹಣದುಬ್ಬರದ ಬಿಕ್ಕಟ್ಟೂ ಸೇರಿಕೊಂಡು ದ್ವೀಪರಾಷ್ಟ್ರದ ಜನತೆ ಹೈರಾಣಾಗಿದ್ದಾರೆ. ಸರಕಾರದ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಜನತೆ ಪ್ರತಿಭಟಿಸುತ್ತಿದ್ದಾರೆ. ಈ ಮಧ್ಯೆ ಆಡಳಿತಾರೂಢ ಮೈತ್ರಿಕೂಟವನ್ನು ಕನಿಷ್ಟ 41 ಸಂಸದರು ತ್ಯಜಿಸಿರುವುದರಿಂದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಆದರೂ ಸರಕಾರ ಅಥವಾ ತಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸ ಹೇಳಿದ್ದಾರೆ.‌

ಹುದ್ದೆಗೆ ಮರಳಿದ ಶ್ರೀಲಂಕಾದ ವಿತ್ತ ಸಚಿವ

ಶ್ರೀಲಂಕಾದ ನೂತನ ವಿತ್ತ ಸಚಿವರಾಗಿ ನೇಮಕಗೊಂಡ ಮರುದಿನ ರಾಜೀನಾಮೆ ಸಲಿಸಿದ್ದ ಅಲಿ ಸಬ್ರಿ ಮತ್ತೆ ಶುಕ್ರವಾರ ಹುದ್ದೆ ಸ್ವೀಕರಿಸಿದ್ದು , ಮುಂದಿನ ದಿನದಲ್ಲಿ ಎಎಂಎಫ್ ಜತೆ ನಡೆಯಲಿರುವ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.
ಅರ್ಥ ಇಲಾಖೆಯ ಹೊಣೆಯನ್ನು ಯಾರಾದರೂ ವಹಿಸಿಕೊಂಡು ದೇಶದ ಅರ್ಥವ್ಯವಸ್ಥೆಗೆ ಹೊಸ ದಾರಿ ಮಾಡಿಕೊಡಲಿ ಎಂಬ ಉದ್ದೇಶದಿಂದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ ಹುದ್ದೆ ವಹಿಸಲು ಯಾರೊಬ್ಬರೂ ಮುಂದೆ ಬಾರದ ಕಾರಣ ಅನಿವಾರ್ಯವಾಗಿ ಮತ್ತು ವಿತ್ತಸಚಿವರ ಹುದ್ದೆಯನ್ನು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಸಬ್ರಿ ಶುಕ್ರವಾರ ಸಂಸತ್ತಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News