ಪುಟಿನ್, ಲಾವ್ರೋವ್ ಪುತ್ರಿಯರಿಗೆ ಬ್ರಿಟನ್ ನಿರ್ಬಂಧ
ಲಂಡನ್, ಎ.8: ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಮತ್ತು ವಿದೇಶ ಸಚಿವ ಸೆರ್ಗೈ ಲಾವ್ರೋವ್ ಅವರ ಪುತ್ರಿಯರ ವಿರುದ್ಧ ನಿರ್ಬಂಧ ಜಾರಿಗೊಳಿಸುವುದಾಗಿ ಬ್ರಿಟನ್ ಶುಕ್ರವಾರ ಘೋಷಿಸಿದೆ.
ಪುಟಿನ್ ಪುತ್ರಿಯರಾದ ಕ್ಯಾತರಿನಾ ತಿಖೊನೊವ ಮತ್ತು ಮರಿಯಾ ವೊರೊಂಟ್ಸೋವ, ಲಾವ್ರೋವ್ ಪುತ್ರಿ ಯೆಕಟೆರಿನಾ ವಿನೊಕುರೊವ ವಿರುದ್ಧ ನಿಬರ್ಂಧ ಜಾರಿಯಾಗಿದೆ. ರಶ್ಯ ಅಧ್ಯಕ್ಷರ ಆಪ್ತ ವಲಯದಲ್ಲಿರುವವರು ನಡೆಸುವ ಅದ್ದೂರಿ ಜೀವನಶೈಲಿಯನ್ನು ಗುರಿಯಾಗಿಸಿ ಇನ್ನಷ್ಟು ನಿರ್ಬಂಧ ಜಾರಿಯಾಗಲಿದೆ. ಇವರ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಜತೆಗೆ ಬ್ರಿಟನ್ನಲ್ಲಿ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬ್ರಿಟನ್ ಹೇಳಿದೆ.
ಅಮೆರಿಕವೂ ಇದೇ ರೀತಿಯ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದೆ . ಜಿ7 ಸಂಘಟನೆಯ ಮೂಲಕ ನಾವು ಪುಟಿನ್ ಅವರ ಯುದ್ಧ ಯಂತ್ರಕ್ಕೆ ಸರಬರಾಜಾಗುವ ಇಂಧನದ ಮೂಲವನ್ನು ಕತ್ತರಿಸಲಿದ್ದೇವೆ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್ ಹೇಳಿದ್ದಾರೆ.