×
Ad

ಐಪಿಎಲ್: ಮುಂಬೈ ವಿರುದ್ಧ ಆರ್‌ಸಿಬಿ ಜಯಭೇರಿ

Update: 2022-04-09 23:25 IST
photo:twitter/@IPL

 ಪುಣೆ, ಎ.9: ಅನುಜ್ ರಾವತ್ (66 ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಚೊಚ್ಚಲ ಅರ್ಧಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 18ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿತು.

      ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಪಡೆದ ಆರ್‌ಸಿಬಿ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗೆಲುವಿನ ರನ್ ದಾಖಲಿಸಿತು.

ನಾಯಕ ಎಫ್‌ಡು ಪ್ಲೆಸಿಸ್(16 ರನ್) ಹಾಗೂ ಅನುಜ್ ರಾವತ್ 8.1 ಓವರ್‌ಗಳಲ್ಲಿ 50 ರನ್ ಗಳಿಸಿ ಆರ್‌ಸಿಬಿಗೆ ಉತ್ತಮ ಆರಂಭ ಒದಗಿಸಿದರು. ಪ್ಲೆಸಿಸ್ ಔಟಾದ ಬಳಿಕ ರಾವತ್‌ರೊಂದಿಗೆ ಕೈಜೋಡಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ(48 ರನ್,36 ಎಸೆತ, 5 ಬೌಂಡರಿ)2ನೇ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ದಿನೇಶ್ ಕಾರ್ತಿಕ್(7) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(8) ಗೆಲುವಿನ ವಿಧಿವಿಧಾನ ಪೂರೈಸಿದರು.

ಇದಕ್ಕೂ ಮೊದಲು ಆರ್‌ಸಿಬಿ ನಾಯಕ ಎಫ್‌ಡು ಪ್ಲೆಸಿಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅಗ್ರ ಸರದಿಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟದ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.

10.1 ಓವರ್‌ಗಳಲ್ಲಿ 62 ರನ್‌ಗೆ ಮುಂಬೈನ ಐದು ವಿಕೆಟ್‌ಗಳನ್ನು ಉರುಳಿಸಿದ ಆರ್‌ಸಿಬಿ ಆರಂಭಿಕ ಆಘಾತ ನೀಡಿತು. ಆಗ ತಂಡವನ್ನು ಆಧರಿಸಿದ ಸೂರ್ಯಕುಮಾರ್(ಔಟಾಗದೆ 68, 37 ಎಸೆತ, 5 ಬೌಂಡರಿ, 6 ಸಿಕ್ಸರ್)ಮುಂಬೈ ಸ್ಕೋರನ್ನು 151ಕ್ಕೆ ತಲುಪಿಸಿದರು.

ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(26 ರನ್)ಹಾಗೂ ಇಶಾನ್ ಕಿಶನ್(26 ರನ್)ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ ಬರೋಬ್ಬರಿ 50 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರೋಹಿತ್ ಶರ್ಮಾ ವಿಕೆಟನ್ನು ಕಬಳಿಸಿದ ಹರ್ಷಲ್ ಪಟೇಲ್ ಮುಂಬೈಗೆ ಶಾಕ್ ನೀಡಿದರು.

ಆರ್‌ಸಿಬಿಯ ಶಿಸ್ತುಬದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಿಂದಾಗಿ ಮುಂಬೈನ ಅಗ್ರ ಕ್ರಮಾಂಕ ಕುಸಿತ ಕಂಡಿತು. ವನಿಂದು ಹಸರಂಗ(2-28) ಹಾಗೂ ಹರ್ಷಲ್ ಪಟೇಲ್(2-23)ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಆಕಾಶ್ ದೀಪ್ ಒಂದು ವಿಕೆಟ್(1-20) ಪಡೆದರು. ಕಿರೋನ್ ಪೊಲಾರ್ಡ್ ಹಾಗೂ ತಿಲಕ್ ವರ್ಮಾ ರನ್ ಖಾತೆ ತೆರೆಯಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News