ಶೆಹಬಾಝ್ ಶರೀಫ್ ಮುಂದಿನ ಪಾಕ್ ಪ್ರಧಾನಿ ?
ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಅಧ್ಯಕ್ಷ ಶೆಹಬಾಝ್ ಶರೀಫ್ ಅವರು ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ವೇದಿಕೆ ಸಜ್ಜಾಗಿದೆ.
ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡ ಬಳಿಕ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. 342 ಸದಸ್ಯ ಬಲದ ಸದನದಲ್ಲಿ 174 ಮಂದಿ ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಿದರು.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ಝರ್ದಾರಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ, ವಿರೋಧ ಪಕ್ಷಗಳ ಜಂಟಿ ಆಯ್ಕೆಯಾಗಿ ಶರೀಫ್ ಅವರ ಉಮೇದುವಾರಿಕೆಯನ್ನು ಘೋಷಿಸಿದ್ದರು. ಸೋಮವಾರ ನಡೆಯುವ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನದಲ್ಲಿ ಶರೀಫ್ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಅವಿಶ್ವಾಸ ನಿರ್ಣಯ ಅಸಿಂಧು ಎಂದು ಉಪಸ್ಪೀಕರ್ ಖಾಸಿಂ ಖಾನ್ ಸೂರಿ ಘೋಷಿಸಿದ ನಿರ್ಧಾರವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ಶನಿವಾರ ಬೆಳಗ್ಗೆ 10.30ರ ಒಳಗಾಗಿ ಅಧಿವೇಶನ ನಡೆಸಿ ಅವಿಶ್ವಾಸ ನಿರ್ಣಯ ಮೇಲಿನ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಿತ್ತು.
ಉದ್ಯಮಿ ಕುಟುಂಬದಲ್ಲಿ 1950ರಲ್ಲಿ ಜನಿಸಿದ ಶೆಹಬಾಝ್ ಶರೀಫ್, ಮೂರು ಬಾರಿ ಅಧಿಕಾರದಲ್ಲಿದ್ದ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರ ತಮ್ಮ. ಶೆಹಬಾಝ್ ಅವರು ಪ್ರಮುಖ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಸೇವೆ ಸಲ್ಲಿಸಿದ್ದರು.
ಶೆಹಬಾಝ್ ಶರೀಫ್ ಅವರು 2018ರ ಆಗಸ್ಟ್ ನಲ್ಲಿ ಪಿಎಂ ಗಾದಿಗೆ ಹಕ್ಕು ಮಂಡಿಸಿದ್ದರು ಆದರೆ ಬಿಲಾವಲ್ ಭುಟ್ಟೊ ನೇತೃತ್ವದ ಪಿಪಿಪಿ ಕೊನೆಕ್ಷಣದಲ್ಲಿ ಪ್ರಧಾನಿ ಆಯ್ಕೆಯ ಮತದಾನದಿಂದ ದೂರ ಉಳಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಹಾದಿ ಸುಗಮವಾಗಿತ್ತು. ಬಳಿಕ ಶೆಹಬಾಝ್ ಶರೀಫ್ ಅವರು ವಿರೋಧ ಪಕ್ಷದ ಮುಖಂಡರಾಗಿದ್ದರು.
ಲಾಹೋರ್ ಸರ್ಕಾರಿ ಕಾಲೇಜಿನ ಪದವೀಧರರಾಗಿರುವ ಶೆಹಬಾಝ್, ಆರಂಭದಲ್ಲಿ ಕುಟುಂಬದ ಉಕ್ಕು ವಹಿವಾಟಿನಲ್ಲಿ ಕೈಜೋಡಿಸಿದ್ದರು. 1985ರಲ್ಲಿ ಲಾಹೋರ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿದ್ದರು. 1983ರಲ್ಲಿ ಪಂಜಾಬ್ ಪ್ರಾಂತ್ಯದ ಹಣಕಾಸು ಸಚಿವರಾಗಿ ಆಯ್ಕೆಯಾದರು. 1997ರ ಚುನಾವಣೆಯಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು. 2008ರಲ್ಲಿ ಮತ್ತೆ ಆ ಹುದ್ದೆಗೆ ಏರಿದರು.