ರಾಹುಲ್ ಗಾಂಧಿ ಸ್ವಂತ ಮನೆಯನ್ನು ಸರಿಪಡಿಸಿಕೊಳ್ಳಲಿ: ಮಾಯಾವತಿ

Update: 2022-04-10 07:42 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಹಾಗೂ  ತಮ್ಮ ಪಕ್ಷದ ಬಗ್ಗೆ ನೀಡಿರುವ ಹೇಳಿಕೆಗಳಿಗೆ ರವಿವಾರ ಪ್ರತಿಕ್ರಿಯಿಸಿದ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು “ಇತರರ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಅವರು ತಮ್ಮ ಸ್ವಂತ ಮನೆಯನ್ನು ಸರಿಪಡಿಸಿಕೊಳ್ಳಬೇಕು’’ ಎಂದು ಸಲಹೆ ನೀಡಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಲವು ವರ್ಷಗಳ ಹಿಂದೆ ಬಿಎಸ್ಪಿ ಪಕ್ಷದ ಮಾನಹಾನಿ ಮಾಡಲು ಪ್ರಯತ್ನಿಸಿದ್ದರು. ಈಗ ಅವರ ಮಗ ರಾಹುಲ್ ಅದೇ ರೀತಿ ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಯಾವತಿ ಹೇಳಿದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಹಾಗೂ  ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲು ತಮ್ಮ ಪಕ್ಷ ಮುಂದಾಗಿತ್ತು  ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಆದರೆ, ಮಾಯಾವತಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ . ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಹಾಗೂ  ಜಾರಿ ನಿರ್ದೇಶನಾಲಯದ ಭಯದಿಂದಾಗಿ ರಾಜ್ಯದಲ್ಲಿ ಬಿಜೆಪಿ ಗೆಲುವಿನ ಸ್ಪಷ್ಟ ಹಾದಿಯನ್ನು ನೀಡಿದರು ಎಂದು ರಾಹುಲ್ ಆರೋಪಿಸಿದರು.

 ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ರವಿವಾರ ತಳ್ಳಿ ಹಾಕಿದ ಮಾಯಾವತಿ, "ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ'' ಎಂದು ಹೇಳಿದರು.

"ಕಾನ್ಶಿರಾಮ್ ಸಿಐಎ ಏಜೆಂಟ್ ಎಂದು ಹೇಳುವ ಮೂಲಕ ರಾಜೀವ್ ಗಾಂಧಿ ಬಿಎಸ್‌ಪಿ ಮಾನಹಾನಿ ಮಾಡಲು ಪ್ರಯತ್ನಿಸಿದ್ದರು.  ಈಗ ಅವರ ಮಗ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಬಿಜೆಪಿಯ ಕೇಂದ್ರೀಯ ಸಂಸ್ಥೆಗಳಿಗೆ ನಾನು ಹೆದರುತ್ತೇನೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಸತ್ಯದ ಕುರುಹು ಕೂಡ ಇಲ್ಲ’’ ಎಂದು ಮಾಯಾವತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News