×
Ad

ಚೀನಾ : ಶಾಂಘೈನಲ್ಲಿ ಲಾಕ್‌ಡೌನ್‌ನಿಂದ ಅಗತ್ಯ ವಸ್ತುಗಳ ಕೊರತೆ; ಜನತೆಯ ಆಕ್ರೋಶ

Update: 2022-04-10 22:15 IST
photo:twitter

ಬೀಜಿಂಗ್, ಎ.4: ಚೀನಾದಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಪ್ರಮುಖ ವಾಣಿಜ್ಯ ಕೇಂದ್ರ ಶಾಂಘೈ ನಗರದಲ್ಲಿ  ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿದೆ.  ಮನೆಯೊಳಗೆ ಬಂಧಿಯಾಗಿರುವ ಜನತೆ ಆಹಾರ, ಔಷಧ ಮತ್ತು  ನೀರಿನ ಕೊರತೆಯಿಂದ ಹತಾಶರಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ರವಾನಿಸುವ ಮೂಲಕ ತಮ್ಮ ಆಕ್ರೋಶ, ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 

ಶಾಂಘೈಯ ಸುಮಾರು 25 ಮಿಲಿಯನ್ ನಿವಾಸಿಗಳು ತಮ್ಮ ಮನೆಯ ಬಾಲ್ಕನಿಗೆ ಅಥವಾ ಕಿಟಕಿಯ ಬಳಿ ಬಂದು ದೈನಂದಿನ ಬಳಕೆಯ ಸಾಮಾಗ್ರಿ ಒದಗಿಸುವಂತೆ ಕೂಗಿ ಹೇಳುತ್ತಿದ್ದಾರೆ. ಜೊತೆಗೆ ಹಾಡಿನ ಮೂಲಕ ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. ಇದೀಗ ನಗರದ ಜನತೆ ಉಪವಾಸ ಬೀಳುವ ಪರಿಸ್ಥಿತಿಯಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದರೆ ಜನತೆಯ ಆಕ್ರೋಶಕ್ಕೆ ತಣ್ಣಗಿನ ಪ್ರತಿಕ್ರಿಯೆ ನೀಡಿರುವ ಶಾಂಘೈ ಆಡಳಿತ ‘ನಿಮ್ಮ ಆತ್ಮದ ಸ್ವಾತಂತ್ರ್ಯದ ಬಯಕೆಯನ್ನು ನಿಯಂತ್ರಿಸಿ’ ಎಂದು ಸಂದೇಶ ರವಾನಿಸುತ್ತಿದ್ದಾರೆ. ಡ್ರೋನ್ ಮೂಲಕ ನಗರದ  ಪ್ರತೀ ಮನೆಯನ್ನೂ ಸಂಪರ್ಕಿಸುವ ಅಧಿಕಾರಿಗಳು ‘ನಿಮ್ಮ ಆತ್ಮದ ಸ್ವಾತಂತ್ರ್ಯದ ಬಯಕೆಯನ್ನು ನಿಯಂತ್ರಿಸಿ, ಮನೆಯ ಕಿಟಕಿ ಬಾಗಿಲು ತೆರೆಯಬೇಡಿ. ಮನೆಯಿಂದ ಹೊರ ಬರಬೇಡಿ. ಸೋಂಕು ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಡಿ’ ಎಂದು ಸೂಚನೆ ರವಾನಿಸುತ್ತಿದ್ದಾರೆ. 2020ರಲ್ಲಿ ವುಹಾನ್ ನಗರದಲ್ಲಿ ಕೊರೋನ ಸೋಂಕಿನ ಪ್ರಥಮ ಅಲೆ ಕಾಣಿಸಿಕೊಂಡಿದ್ದಾಗ ಚೀನಾದ ಸಂಸದರು ‘ ನಿಮ್ಮ ಆತ್ಮದ ಸ್ವಾತಂತ್ರ್ಯದ ಬಯಕೆಯನ್ನು ನಿಯಂತ್ರಿಸಿ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಗಮನಸೆಳೆದಿದ್ದರು. ಇದೀಗ 2 ವರ್ಷದ ಬಳಿಕ ಮತ್ತೆ ಈ ಹೇಳಿಕೆಯನ್ನು ಚೀನಾದ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ. 

ಚೀನಾದಲ್ಲಿ ದೇಶದಾದ್ಯಂತ ಕೋವಿಡ್ ಸೋಂಕು ಪ್ರಕರಣ ಉಲ್ಬಣಿಸಿರುವುದರಿಂದ ಶಾಂಘೈ ಮತ್ತು ಈಶಾನ್ಯದ ಜಿಲಿನ್ ಪ್ರಾಂತದಲ್ಲಿನ ಆರೋಗ್ಯ ಮೂಲಸೌಕರ್ಯದ ಮೇಲಿನ ಒತ್ತಡವನ್ನು ಅನಿರೀಕ್ಷಿತವಾಗಿ ಹೆಚ್ಚಿಸಿದ ಜೊತೆಗೆ, ಒಮೈಕ್ರಾನ್ ರೂಪಾಂತರ ಸೋಂಕು ಪ್ರಕರಣವನ್ನು ನಿಯಂತ್ರಿಸಲು ನೂತನ ಉಪಕ್ರಮಗಳ ಬಗ್ಗೆ ಗಮನ ಹರಿಸುವ ಅಗತ್ಯವನ್ನು ಮುಂದಿರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News