×
Ad

ಸರಕಾರದ ಅದಕ್ಷತೆಯಿಂದ ಸಮಸ್ಯೆ ಬಿಗಡಾಯಿಸಿದೆ: ಶ್ರೀಲಂಕಾ ಮಾಜಿ ಪ್ರಧಾನಿ ಆರೋಪ

Update: 2022-04-10 22:35 IST
photo:twitter

ಕೊಲಂಬೊ, ಎ.10: ದೇಶಕ್ಕೆ ಎದುರಾಗಿರುವ ಭೀಕರ ಆರ್ಥಿಕ ಸಮಸ್ಯೆಯು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು ಇದೀಗ ದೇಶ ಆರ್ಥಿಕ ವಿಪತ್ತಿನ ಅಂಚಿನತ್ತ ಸಾಗುತ್ತಿದೆ. ಕಳೆದ 2 ವರ್ಷಗಳಿಂದ ಆರ್ಥಿಕ ಸಮಸ್ಯೆಗಳ ಸೂಚನೆ ಗೋಚರಿಸಿದ್ದರೂ ಈಗಿನ ಸರಕಾರ ಅದನ್ನು ನಿರ್ಲಕ್ಷಿಸಿತ್ತು. ಈಗ ಸಮಸ್ಯೆ ಬಿಗಡಾಯಿಸಲು ಸರಕಾರದ ಅದಕ್ಷತೆಯೇ ಕಾರಣ ಎಂದು ಶ್ರೀಲಂಕಾದ ಮಾಜಿ ಪ್ರಧಾನಿ ರಣಿಲ್ ವಿಕ್ರಮಸಿಂಘೆ ರವಿವಾರ ಆರೋಪಿಸಿದ್ದಾರೆ. 

ಆರ್ಥಿಕ ಸವಾಲುಗಳನ್ನು ಎದುರಿಸುವಷ್ಟು ದಕ್ಷತೆ ಸರಕಾರದಲ್ಲಿಲ್ಲ. ಇದರ ಪರಿಣಾಮ ಈಗ ದೇಶದಲ್ಲಿ ದೈನಂದಿನ ಬಳಕೆಯ ವಸ್ತುಗಳನ್ನು ಪಡೆಯಬೇಕಿದ್ದರೂ ಜನತೆ ಮಾರುದ್ದದ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಈ ಸಮಸ್ಯೆ(ಆರ್ಥಿಕ ಬಿಕ್ಕಟ್ಟು) ನಮ್ಮ ಸರಕಾರದ ಅವಧಿಯಲ್ಲಿ ಕಂಡುಬಂದಿಲ್ಲ. ನಮ್ಮ ಸರಕಾರವಿದ್ದಾಗ ಜನತೆ ದೈನಂದಿನ ಬಳಕೆಯ ವಸ್ತುಗಳಿಗೆ ಕ್ಯೂ ನಿಲ್ಲುವ ಅಗತ್ಯವಿರಲಿಲ್ಲ. ಜನತೆ ರಸ್ತೆಗಿಳಿದು ಪ್ರತಿಭಟಿಸುವ ಪರಿಸ್ಥಿತಿಯೂ ಇರಲಿಲ್ಲ. ಆದರೆ ಗೊಟಬಯ ರಾಜಪಕ್ಸ ಸರಕಾರದ ಅದಕ್ಷತೆ ಈಗ ದೇಶದ ಅರ್ಥವ್ಯವಸ್ಥೆಯನ್ನು ಪತನದ ಅಂಚಿಗೆ ತಂದು ನಿಲ್ಲಿಸಿದೆ ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ವಿಕ್ರಮಸಿಂಘೆ ಹೇಳಿದ್ದಾರೆ. 

2019ರಲ್ಲಿ ತಾನು ಅಧಿಕಾರದಿಂದ ನಿರ್ಗಮಿಸಿದಾಗ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು ಮತ್ತು ನಾವು  ಮಿಗತೆ ಬಜೆಟ್ ಮಂಡಿಸಿದ್ದೆವು. ಆಗ ಆಮದು ಪ್ರಕ್ರಿಯೆಗೆ ಪಾವತಿಸಲು ಸಾಕಷ್ಟು ಹಣ ದೇಶದ ಖಜಾನೆಯಲ್ಲಿತ್ತು. ಈಗಿನ ಸರಕಾರ ಸಕಾಲಿಕ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ. ಐಎಂಎಫ್(ಅಂತರಾಷ್ಟ್ರಿಯ ಹಣಕಾಸು ನಿಧಿ)ಯಿಂದ ಆರ್ಥಿಕ ನೆರವು ಪಡೆಯುವ ಪ್ರಕ್ರಿಯೆ ದೀರ್ಘಾವಧಿಯದ್ದಾಗಿದ್ದು ಸರಕಾರ ಈಗ ಎಚ್ಚೆತ್ತುಕೊಂಡಿದೆ. ಆದರೆ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ವಾರ ಬೇಕಾಗಬಹುದು ಎಂದರು. ಆಮದು ಪ್ರಕ್ರಿಯೆಯ ಪಾವತಿಗೆ ಸರಕಾರದ ಬಳಿ ಹಣವಿಲ್ಲ. ಆಮದು ಮಾಡಿಕೊಳ್ಳಲು ಅಗತ್ಯವಿರುವ ಹಣವನ್ನು  ಪ್ರಮುಖ ರಫ್ತು ಸಂಸ್ಥೆಗಳು ಪಾವತಿಸುವಂತೆ ಸರಕಾರ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ, ಭಾರತ ತೈಲ ಖರೀದಿಗೆ ನೀಡಿರುವ  ಸಾಲ ಮೇ ತಿಂಗಳ 2ನೇ ವಾರಕ್ಕೆ ಮುಗಿಯಲಿದೆ, ನಂತರ ಗಂಭೀರ ಸಮಸ್ಯೆ ಎದುರಾಗಲಿದೆ  ಎಂದು ವಿಕ್ರಮಸಿಂಘೆ ಹೇಳಿದರು. 

ಇದೇ ವೇಳೆ, ಸಂಕಷ್ಟದ ಸಮಯದಲ್ಲಿ ಭಾರತ ಗರಿಷ್ಟ ನೆರವು ನೀಡಿದೆ. ಆರ್ಥಿಕೇತರ ರೀತಿಯಲ್ಲಿ ಭಾರತ ಇನ್ನೂ ನೆರವು ಮುಂದುವರಿಸಿದ್ದು ಭಾರತ ನೀಡಿದ ಬೆಂಬಲದ ಪರಿಣಾಮ ಮುಂದಿನ ದಿನದಲ್ಲಿ ತಿಳಿದುಬರಲಿದೆ  ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News