ನ್ಯೂಯಾರ್ಕ್: ಸಬ್ವೇ ನಿಲ್ದಾಣದಲ್ಲಿ ಗುಂಡಿನ ದಾಳಿ ಕನಿಷ್ಠ 13 ಮಂದಿಗೆ ಗಾಯ; ದಾಳಿ ಬಳಿಕ ದುಷ್ಕರ್ಮಿ ಪರಾರಿ ಶಂಕೆ

Update: 2022-04-12 18:22 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಎ.12: ಅಮೆರಿಕದ ನ್ಯೂಯಾರ್ಕ್ ನ ಬ್ರೂಕ್ಲಿನ್ ಸಬ್‌ವೇ ನಿಲ್ದಾಣದಲ್ಲಿ ಅಜ್ಞಾತ ದುಷ್ಕರ್ಮಿಯೊಬ್ಬ ಮನಬಂದಂತೆ ಗುಂಡು ಹಾರಾಟ ನಡೆಸಿದ್ದು,ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆದ ಸ್ಥಳದಲ್ಲಿ ಕೆಲವು ಸ್ಫೋಟಕಗಳು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. ಮಂಗಳವಾರ ಬೆಳಗ್ಗೆ 8:30ರ ವೇಳೆಗೆ ಜನದಟ್ಟಣೆಯಿದ್ದ ಸಮಯದಲ್ಲಿ ಮಾಸ್ಕ್ ಧರಿಸಿದ ದುಷ್ಕರ್ಮಿಯೊಬ್ಬ ಬ್ರೂಕ್ಲಿನ್ ಪ್ರದೇಶದ ಸಬ್ವೇ ರೈಲು ನಿಲ್ದಾಣದ 36ನೇ ಸ್ಟ್ರೀಟ್ ನಲ್ಲಿ ದಾಳಿ ನಡೆಸಿದ್ದಾನೆಂದು ಮೂಲಗಳು ತಿಳಿಸಿವೆ. ಘಟನೆಯ ಬಳಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆಯೆಂದು ವರದಿ ಹೇಳಿದೆ.

ಗುಂಡಿನ ದಾಳಿಯಲ್ಲಿ ರಕ್ತಸಿಕ್ತ ಗಾಯಗಳಾಗಿದ್ದ ಪ್ರಯಾಣಿಕರು ಸ್ಥಳದಲ್ಲೇ ಕುಸಿದು ಕುಳಿತಿರುವುದನ್ನು ಹಾಗೂ ಅವರಿಗೆ ಇತರರು ನೆರವಾಗುತ್ತಿರುವ ದೃಶ್ಯಗಳ ವಿಡಿಯೋಗಳು ಪ್ರಸಾರವಾಗಿವೆ.

ಮೆಟ್ರೋ ರೈಲಿನ ಬೋಗಿಯೊಂದರಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ದುಷ್ಕರ್ಮಿಯು ರೈಲಿನೊಳಗೂ ಪ್ರವೇಶಿಸಿ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ. ಗ್ಯಾಸ್ ಮಾಸ್ಕ್ ಹಾಗೂ ನಿರ್ಮಾಣ ಕಾರ್ಮಿಕರು ಧರಿಸುವ ಕಿತ್ತಳೆ ಬಣ್ಣದ ಜಾಕೆಟ್ ಧರಿಸಿದ್ದ ವ್ಯಕ್ತಿಯು ದಾಳಿಗೆ ಮುನ್ನ ಹೊಗೆಬಾಂಬನ್ನು ಸ್ಪೋಟಿಸಿದ್ದ. ಆನಂತರ ಗುಂಡಿನ ದಾಳಿ ನಡೆಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಸಾರ್ವಜನಿಕರು ಬಂದೂಕುಗಳನ್ನು ಹೊಂದುವುದರ ಮೇಲೆ ಹೊಸ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಘೋಷಿಸಿದ ಮರುದಿನವೇ ಈ ದಾಳಿ ನಡೆದಿದೆ. ದಾಳಿಯ ಬಳಿಕ ದುಷ್ಕರ್ಮಿಯು ಸ್ಥಳದಿಂದ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ. ಕಳೆದ ಎರಡು ವರ್ಷಗಳಿಂದ ಅಮೆರಿಕದ ವಿವಿಧ ನಗರಗಳಲ್ಲಿ ಶೂಟೌಟ್ ಪ್ರಕರಣಗಳು ವರದಿಯಾಗಿದ್ದು, ಕಾನೂನು, ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News