ರಶ್ಯದಿಂದ ರಂಜಕ ಬಾಂಬ್ ಬಳಕೆ: ಝೆಲೆನ್ಸ್ಕಿ ಆರೋಪ

Update: 2022-04-13 18:28 GMT

ಕೀವ್, ಎ.13: ಉಕ್ರೇನ್ ನಲ್ಲಿ ನಡೆಸುತ್ತಿರುವ ಆಕ್ರಮಣದಲ್ಲಿ ರಶ್ಯ ರಂಜಕ ಬಾಂಬ್ ಬಳಸುವ ಮೂಲಕ ಜನರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುತ್ತಿದೆ. ಇದೀಗ ಭೀತಿ ಹುಟ್ಟಿಸುವ ತಂತ್ರಗಾರಿಕೆಯ ಮೂಲಕ ತನ್ನ ಆಕ್ರಮಣವನ್ನು ರಶ್ಯ ಮುಂದುವರಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ಹೇಳಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎಸ್ಟೋನಿಯಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ರಶ್ಯ ಬಲಪ್ರಯೋಗಿಸಿ ಉಕ್ರೇನ್ ಜನರನ್ನು ದೇಶದಿಂದ ಸ್ಥಳಾಂತರಗೊಳಿಸಲು ಪ್ರಯತ್ನಿಸುತ್ತಿದ್ದು ಇದನ್ನು ತಡೆಯಲು ಅಂತರಾಷ್ಟ್ರೀಯ ಸಮುದಾಯ ತುರ್ತು ಕ್ರಮ ಕೈಗೊಳ್ಳಬೇಕು. ಅವರು (ರಶ್ಯ ಸೇನೆ) ಮಾಡಿದ್ದನ್ನೆಲ್ಲಾ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಇನ್ನಷ್ಟು ನಿರ್ಬಂಧ ವಿಧಿಸಿ ಅವರ ಮೇಲೆ ಒತ್ತಡ ಹೇರುವುದೇ ಈಗ ಉಳಿದಿರುವ ಮಾರ್ಗವಾಗಿದೆ ಎಂದಿದ್ದಾರೆ.

   ಬಿಳಿ ರಂಜಕದ ಪುಡಿಯಿಂದ ತಯಾರಿಸುವ ರಂಜಕ ಬಾಂಬ್, ನೆಲಕ್ಕೆ ಬಿದ್ದು ಹರಡಿಕೊಳ್ಳುವ ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡು ಸುತ್ತಮುತ್ತಲಿನ ಪ್ರದೇಶ ಸುಟ್ಟುಹೋಗುತ್ತದೆ. ಅಲ್ಲದೆ ರಂಜಕ ಬಾಂಬಿಂದ ವಿನಾಶಕಾರಿ ಸ್ಫೋಟದ ಜತೆಗೆ ಜನರ ದೇಹದಲ್ಲಿ ತುರಿಕೆ ಮತ್ತಿತರ ಸಮಸ್ಯೆ ಕಾಡುವುದರಿಂದ ಸ್ಥಳೀಯರು ಹೆದರಿ ಹೋಗುತ್ತಾರೆ. ಇದೀಗ ಉಕ್ರೇನ್ ನಲ್ಲಿನ ಯುದ್ಧದಲ್ಲಿ ರಶ್ಯ ಈ ತಂತ್ರ ಬಳಸುತ್ತಿದೆ ಎಂದು ಉಕ್ರೇನ್ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News