ತನಿಖೆ ನಡೆಸದೆ ಮನೆಗಳನ್ನು ಕೆಡವುವ ಅಧಿಕಾರ ಪ್ರಧಾನಿಗೂ ಇಲ್ಲ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಜೈಪುರ: ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆಂಬ ಆರೋಪದ ಮೇಲೆ ಮಧ್ಯಪ್ರದೇಶ ಆಡಳಿತ ಬುಲ್ಡೋಜರ್ ಬಳಸಿ ಮನೆಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿದ್ದಾರೆ, ತನಿಖೆಯಿಲ್ಲದೆ ಜನರ ಮನೆಯನ್ನು ಕೆಡವುವ ಹಕ್ಕು ಪ್ರಧಾನಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.
“ನಿಮಗೆ ಈ ಹಕ್ಕನ್ನು ಕೊಟ್ಟವರು ಯಾರು? ಯಾವುದೇ ತನಿಖೆ ನಡೆಸದೆ, ತಪ್ಪಿತಸ್ಥರೆಂದು ಕಂಡು ಹಿಡಿಯದೆ ಯಾರೊಬ್ಬರ ಮನೆಯನ್ನು ಕೆಡವುವ ಹಕ್ಕು ಮುಖ್ಯಮಂತ್ರಿಗಾಗಲೀ ಪ್ರಧಾನಿಗಾಗಲೀ ಇಲ್ಲ. ಮುಗ್ಧ ಜನರು ಏನನ್ನು ಅನುಭವಿಸುತ್ತಿದ್ದಾರೆಂದು ಊಹಿಸಿಕೊಳ್ಳಿ” ಎಂದು ಗೆಹ್ಲೋಟ್ ಗುರುವಾರ ಜೈಪುರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕರೌಲಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಗೆಹ್ಲೋಟ್, ರಾಜಸ್ಥಾನ ಸರ್ಕಾರವು ಅಮಾಯಕರನ್ನು ಬಂಧಿಸಿದೆ ಎಂದು ಆರೋಪಿಸುತ್ತಿರುವ ಬಿಜೆಪಿಗೆ, ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ್‌ಗಳನ್ನು ಚಲಾಯಿಸುವುದು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ.
“ಅವರನ್ನು ಬಂಧಿಸಿದ ನಂತರ, ರಾಜಸ್ಥಾನ ಸರ್ಕಾರವು ಅವರ ಮನೆಗಳ ಮೇಲೆ ಬುಲ್ಡೋಜರ್‌ಗಳನ್ನು ಚಲಾಯಿಸಬೇಕೆ? ನಿನ್ನೆ ರಾತ್ರಿ ಟಿವಿಯಲ್ಲಿ, ಕೆಡವಲ್ಪಟ್ಟ ಮನೆಯ ಜನರು ಅಳುತ್ತಿರುವುದನ್ನು ನೋಡಿದೆ. ಅವರು ಬಡವರು ಮತ್ತು ಅವರ ಹೆಸರುಗಳು ಆರೋಪಿಗಳಾಗಿ ಬಂದಿರುವುದರಿಂದ ನೀವು ಅವರ ಮನೆಗಳನ್ನು ನೆಲಸಮ ಮಾಡುತ್ತಿದ್ದೀರಿ ಎಂದು ನೀವು ಹೇಳಿದ್ದೀರಿ, ಆದರೆ, ಯಾರಿಗೂ ಮನೆಗಳನ್ನು ಕೆಡವಲು ಹಕ್ಕಿಲ್ಲ. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಮುಂದೊಂದು ದಿನ ಎಲ್ಲರೂ ಸಂಕಷ್ಟ ಅನುಭವಿಸಬೇಕಾಗುತ್ತದೆ. ಜನರು ಸಂವಿಧಾನದ ಜೊತೆಗೆ ಕಾನೂನನ್ನು ಅಪಹಾಸ್ಯ ಮಾಡುತ್ತಿದ್ದಾರೆ,'' ಎಂದು ಗೆಹ್ಲೋಟ್ ಹೇಳಿದ್ದಾರೆ.