ಸಾಂವಿಧಾನಿಕ ಪ್ರಜಾಪ್ರಭುತ್ವದ ಗುರಿಗಳನ್ನು ಸಾಧಿಸುವಲ್ಲಿ ಪ್ರತಿಯೊಂದೂ ಸರಕಾರದ ಕೊಡುಗೆಯಿದೆ: ಪ್ರಧಾನಿ ಮೋದಿ

Update: 2022-04-14 14:57 GMT

ಹೊಸದಿಲ್ಲಿ,ಎ.14: ಸ್ವಾತಂತ್ರ್ಯಾನಂತರ ರಚನೆಯಾದ ಪ್ರತಿಯೊಂದು ಸರಕಾರವೂ ಭಾರತವನ್ನು ಇಂದು ಅದು ಸಾಧಿಸಿರುವ ಎತ್ತರಕ್ಕೆ ಒಯ್ಯುವಲ್ಲಿ ಕೊಡುಗೆ ಸಲ್ಲಿಸಿವೆ ಎಂದು ಗುರುವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು,ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಜಾಪ್ರಭುತ್ವವವನ್ನು ಬಲಪಡಿಸುವ ಹೆಮ್ಮೆಯ ಸಂಪ್ರದಾಯವನ್ನು ದೇಶವು ಹೊಂದಿದೆ ಎಂದು ಪ್ರತಿಪಾದಿಸಿದರು.

‘ಪ್ರಧಾನ ಮಂತ್ರಿ ಸಂಗ್ರಹಾಲಯ ’ವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಾಂವಿಧಾನಿಕ ಪ್ರಜಾಪ್ರಭುತ್ವದ ಗುರಿಗಳ ಸಾಧನೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಧಾನಿಯೂ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ಸ್ವತಂತ್ರ ಭಾರತದ ಪಯಣದ ಕುರಿತು ತಿಳುವಳಿಕೆಯನ್ನು ನೀಡುತ್ತದೆ. ಈ ವಸ್ತು ಸಂಗ್ರಹಾಲಯವು ಪ್ರತಿ ಸರಕಾರವು ಹಂಚಿಕೊಂಡಿರುವ ಪರಂಪರೆಯ ಜೀವಂತ ಸಂಕೇತವೂ ಆಗಿದೆ ಎಂದರು.

‘ನಮ್ಮ ಹೆಚ್ಚಿನ ಪ್ರಧಾನಿಗಳು ಸಾಮಾನ್ಯ ಹಿನ್ನೆಲೆಗಳಿಂದ ಬಂದವರು ಎನ್ನುವುದು ಭಾರತೀಯರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕುಗ್ರಾಮಗಳಿಂದ,ಬಡಕುಟುಂಬಗಳಿಂದ,ರೈತರ ಕುಟುಂಬಗಳಿಂದ ಬಂದವರು ಪ್ರಧಾನಿ ಹುದ್ದೆಗೆ ಏರಿರುವುದು ಭಾರತೀಯ ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯಗಳ ಮೇಲಿನ ನಂಬಿಕೆಯನ್ನು ಬಲಗೊಳಿಸುತ್ತದೆ ’ಎಂದು ಮೋದಿ ನುಡಿದರು.

ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಪ್ರತಿಪಾದಿಸಿದ ಅವರು,ಭಾರತೀಯ ಪ್ರಜಾಪ್ರಭುತ್ವವು ಕಾಲ ಸರಿದಂತೆ ನಿರಂತರವಾಗಿ ಬದಲಾಗುತ್ತದೆ ಎನ್ನುವುದು ಅದರ ಮಹಾನ್ ವೈಶಿಷ್ಟವಾಗಿದೆ. ಪ್ರತಿ ಯುಗದಲ್ಲಿ,ಪ್ರತಿ ಪೀಳಿಗೆಯಲ್ಲಿ ಪ್ರಜಾಪ್ರಭುತ್ವವನ್ನು ಹೆಚ್ಚು ಆಧುನಿಕಗೊಳಿಸುವ,ಸಶಕ್ತಗೊಳಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ‘ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಜಾಪ್ರಭುತ್ವವವನ್ನು ಬಲಪಡಿಸುವ ಹೆಮ್ಮೆಯ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ಇದರಿಂದಾಗಿಯೇ ನಾವು ಸಹ ನಮ್ಮ ಪ್ರಯತ್ನಗಳ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಹೊಣೆಗಾರಿಕೆಯನ್ನು ಹೊಂದಿದ್ದೇವೆ. ದೇಶವು ತನ್ನ ಸ್ವಾತಂತ್ರದ 75ನೇ ವರ್ಷವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ಈ ಸಂಗ್ರಹಾಲಯವು ಉತ್ತಮ ಸ್ಫೂರ್ತಿಯಾಗಿದೆ ’ಎಂದರು.

ಇಲ್ಲಿಗೆ ಭೇಟಿ ನೀಡುವ ಜನರು ದೇಶದ ಮಾಜಿ ಪ್ರಧಾನಿಗಳ ಕೊಡುಗೆಗಳು,ಅವರ ಹಿನ್ನೆಲೆ ಮತ್ತು ಹೋರಾಟಗಳ ಕುರಿತು ತಿಳಿದುಕೊಳ್ಳಲಿದ್ದಾರೆ. ಈ ವಸ್ತು ಸಂಗ್ರಹಾಲಯವು ಸ್ವಾತಂತ್ರಾನಂತರ ದೇಶದ ಪ್ರತಿಯೊಬ್ಬ ಪ್ರಧಾನಿಗೂ ಗೌರವವಾಗಿದೆ ಎಂದು ಮೋದಿ ನುಡಿದರು.

ವಸ್ತು ಸಂಗ್ರಹಾಲಯವು ದೇಶದ ಪ್ರಧಾನಿಗಳ ಜೀವನ ಮತ್ತು ಕೊಡುಗೆಗಳ ಮೂಲಕ ಸ್ವಾತಂತ್ರದ ನಂತರದ ಭಾರತದ ಕಥೆಯನ್ನು ನಿರೂಪಿಸುತ್ತದೆ ಎಂದು ಪ್ರಧಾನಿ ಕಚೇರಿಯು ಹೇಳಿದೆ.

ಉದ್ಘಾಟನೆಗೆ ಮುನ್ನ ಮೋದಿ ವಸ್ತು ಸಂಗ್ರಹಾಲಯದ ಮೊದಲ ಟಿಕೆಟನ್ನೂ ಖರೀದಿಸಿದರು.

ರಾಷ್ಟ್ರನಿರ್ಮಾಣದಲ್ಲಿ ಭಾರತದ ಎಲ್ಲ ಪ್ರಧಾನಿಗಳ ಕೊಡುಗೆಗಳನ್ನು ಗೌರವಿಸಲು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ ಮತ್ತು ಇದು ಅವರ ಸಿದ್ಧಾಂತ ಅಥವಾ ಅಧಿಕಾರಾವಧಿಯನ್ನು ಪರಿಗಣಿಸದೆ ಪ್ರತಿಯೊಬ್ಬ ಪ್ರಧಾನಿಗೆ ಗೌರವಸೂಚಕವಾಗಿದೆ. ವಸ್ತು ಸಂಗ್ರಹಾಲಯವು ನಮ್ಮ ಎಲ್ಲ ಪ್ರಧಾನಿಗಳ ನಾಯಕತ್ವ,ದೂರದೃಷ್ಟಿ ಮತ್ತು ಸಾಧನೆಗಳ ಕುರಿತು ಯುವ ಪೀಳಿಗೆಯನ್ನು ಸಂವೇದನಾಶೀಲಗೊಳಿಸುವ ಮತ್ತು ಅವರಿಗೆ ಸ್ಫೂರ್ತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ಕಚೇರಿಯು ತಿಳಿಸಿದೆ.

ಪ್ರಧಾನಿ ಮಂತ್ರಿ ಸಂಗ್ರಹಾಲಯವು ಒಟ್ಟು 40 ಗ್ಯಾಲರಿಗಳನ್ನು ಹೊಂದಿದ್ದು,ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯ ಕುರಿತು ಪ್ರದರ್ಶನಗಳನ್ನು ಒಳಗೊಂಡಿದೆ. ಸಂಗ್ರಹಾಲಯವು ಪ್ರಧಾನಿಗಳ ಸಾಧನೆಗಳನ್ನು ವಿವರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News