ಉಕ್ರೇನ್‌ನ 5 ಲಕ್ಷ ಜನರನ್ನು ಬಲವಂತದಿಂದ ಸ್ಥಳಾಂತರಿಸಿದ ರಶ್ಯ : ಝೆಲೆನ್‌ಸ್ಕಿ ಆರೋಪ

Update: 2022-04-14 18:19 GMT

 ಕೀವ್, ಎ.14: ಉಕ್ರೇನ್ ಮೇಲಿನ ಆಕ್ರಮಣವನ್ನು ಮುಂದುವರಿಸಿರುವ ರಶ್ಯವು ಸುಮಾರು 5 ಲಕ್ಷದಷ್ಟು ಉಕ್ರೇನ್ ಪ್ರಜೆಗಳನ್ನು ಬಲವಂತದಿಂದ ಸ್ಥಳಾಂತರಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

 ಎಸ್ತೋನಿಯಾ ದೇಶದ ಸಂಸತ್ತನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸುಮಾರು 5 ಲಕ್ಷ ಉಕ್ರೇನ್ ನಿವಾಸಿಗಳನ್ನು ರಶ್ಯ ಒಕ್ಕೂಟದ ದೂರದ ಪ್ರದೇಶಗಳಿಗೆ ಸ್ಥಳಾಂತರಿಸಿರುವ ಸಾಧ್ಯತೆಯಿದೆ. ಅವರ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಇತರ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಉಕ್ರೇನ್‌ನ ಮಕ್ಕಳನ್ನು ರಶ್ಯದ ಕುಟುಂಬಕ್ಕೆ ಅಕ್ರಮವಾಗಿ ದತ್ತು ನೀಡಲೂ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

  ಉಕ್ರೇನ್ ಪ್ರಜೆಗಳನ್ನು ರಶ್ಯಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ತಡೆಯೊಡ್ಡುವ ಉಪಕ್ರಮಗಳನ್ನು ರೂಪಿಸುವಂತೆ ಮತ್ತು ಗಡೀಪಾರು ಆದವರು ಉಕ್ರೇನ್‌ಗೆ ಹಿಂದಿರುಗಿಸಲು ರಶ್ಯದ ಮೇಲೆ ಒತ್ತಡ ಹೇರುವಂತೆ ಯುರೋಪಿಯನ್ ಯೂನಿಯನ್ ಅನ್ನು ಆಗ್ರಹಿಸಿದರು. ಯುರೋಪಿಯನ್ ಯೂನಿಯನ್‌ಗೆ ಈ ಶಕ್ತಿ ಇದೆ, ಅದನ್ನು ಅವರು ಬಳಸಬೇಕು. ಅಲ್ಲದೆ ಉಕ್ರೇನ್ ಜನರನ್ನು ಹೆದರಿಸಲು ರಶ್ಯ ರಂಜಕ ಬಾಂಬ್ ಪ್ರಯೋಗಿಸುತ್ತಿದೆ. ರಶ್ಯದ ಅನ್ಯಾಯವನ್ನು ನಿಯಂತ್ರಿಸಲು ಆ ದೇಶದ ವಿರುದ್ಧ ಇನ್ನಷ್ಟು ನಿರ್ಬಂಧ ಜಾರಿಗೊಳಿಸುವುದೇ ಉತ್ತಮ ಮಾರ್ಗವಾಗಿದೆ. ರಶ್ಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣ ದಿಗ್ಬಂಧಿಸುವುದು ಮತ್ತು ಯುರೋಪಿಯನ್ ಯೂನಿಯನ್ ಮಟ್ಟದಲ್ಲಿ ರಶ್ಯದ ವಿರುದ್ಧ ಹೊಸದಾದ ನಿರ್ಬಂಧ ಜಾರಿಯಾಗಬೇಕು ಎಂದವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News