×
Ad

ಸೆರೆಸಿಕ್ಕಿದ ಯೋಧರಿಗೆ ಉಕ್ರೇನ್ ಚಿತ್ರಹಿಂಸೆ : ರಶ್ಯ ಆರೋಪ

Update: 2022-04-14 23:50 IST

ಮಾಸ್ಕೊ, ಎ.14: ಯುದ್ಧದ ಸಂದರ್ಭ ಸೆರೆಸಿಕ್ಕ ತನ್ನ ಯೋಧರಿಗೆ ಉಕ್ರೇನ್ ಸೇನೆ ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿರುವ ರಶ್ಯದ ತನಿಖಾ ಸಮಿತಿ, ಈ ವಿಷಯದಲ್ಲಿ ಉಕ್ರೇನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದೆ.

  ಝಪೊರಿಝಿಯ ಮತ್ತು ಮಿಕೊಲೈವ್ ಪ್ರದೇಶದಲ್ಲಿ ರಶ್ಯದ ಯೋಧರನ್ನು ಉಕ್ರೇನ್‌ನ ಭದ್ರತಾ ಪಡೆ ಸೆರೆಹಿಡಿದಿದೆ ಎಂದು ಪ್ರಮುಖ ಅಪರಾಧಗಳ ತನಿಖೆಗೆ ರಚಿಸಲಾಗಿರುವ ತನಿಖಾ ಸಮಿತಿ ಗುರುವಾರ ಹೇಳಿದೆ. ಸೆರೆಸಿಕ್ಕ ಯೋಧರಿಗೆ ಚಿತ್ರಹಿಂಸೆ ನೀಡಿ ಅವರು, ತಮ್ಮ ವಾಸ್ತವಿಕ ಸ್ಥಿತಿಯ ಬಗ್ಗೆ ಮತ್ತು ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಬಗ್ಗೆ ಸುಳ್ಳು ಹೇಳಿಕೆ ನೀಡುವಂತೆ ಬಲವಂತಪಡಿಸಲಾಗುತ್ತಿದೆ ಎಂದು ಸಮಿತಿ ಹೇಳಿದೆ. ಲುಷಾಂಕ್ ಪ್ರಾಂತದಲ್ಲಿನ ನಾಗರಿಕರು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಉಕ್ರೇನ್‌ನ ಸೇನೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಅಲೆಕ್ಸಾಂಡರ್ ಬಾಸ್ತ್ರಿಕಿನ್ ಗುರುವಾರ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್, ಯುದ್ಧ ಖೈದಿಗಳನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಹಾಗೂ ಇದರ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News