ಅಮೆರಿಕ: ಮಾರ್ಚ್‌ನಲ್ಲಿ ಮಾರಾಟ ಕ್ಷೇತ್ರ ಚೇತರಿಕೆ

Update: 2022-04-14 18:22 GMT

ವಾಷಿಂಗ್ಟನ್, ಎ.14: ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರ(ರಿಟೈಲ್ ಸೇಲ್ಸ್)ದಲ್ಲಿ ಮಾರ್ಚ್ ತಿಂಗಳಲ್ಲಿ ಏರಿಕೆ ದಾಖಲಾಗಿದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಯ ವೆಚ್ಚದಲ್ಲಿ ಕಡಿತ ಮಾಡುತ್ತಿದ್ದಾರೆ ಎಂದು ಅಮೆರಿಕದ ವಾಣಿಜ್ಯ ಇಲಾಖೆ ಗುರುವಾರ ಹೇಳಿದೆ.

   ಗ್ಯಾಸೊಲಿನ್ ಅಥವಾ ಪೆಟ್ರೋಲ್ ಮತ್ತು ಆಹಾರ ಕ್ಷೇತ್ರದ ಮಾರಾಟದಲ್ಲಿ ಹೆಚ್ಚಳ ದಾಖಲಾಗಿದ್ದು ಮಾರ್ಚ್‌ನಲ್ಲಿ ಚಿಲ್ಲರೆ ಮಾರಾಟ 0.5% ಏರಿಕೆ ದಾಖಲಿಸಿದೆ. ಉಕ್ರೇನ್ ಮೇಲಿನ ರಶ್ಯ ಆಕ್ರಮಣದ ಹಿನ್ನೆಲೆಯಲ್ಲಿ ಅಮೆರಿಕದ ಗ್ಯಾಸೊಲಿನ್ ಮತ್ತು ಪೆಟ್ರೋಲ್ ದರ ಗರಿಷ್ಟ ಮಟ್ಟಕ್ಕೆ ತಲುಪಿದ್ದರಿಂದ ಮಾರ್ಚ್‌ನಲ್ಲಿ ಮಾಸಿಕ ಗ್ರಾಹಕ ಬೆಲೆಯಲ್ಲಿ ಹೆಚ್ಚಳವಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತೀ ಗ್ಯಾಲನ್ ತೈಲದ ದರದಲ್ಲಿ ಸರಾಸರಿ 4.33 ಡಾಲರ್ ಏರಿಕೆಯಾಗಿದ್ದು ಇದು ಸಾರ್ವಕಾಲಿಕ ಏರಿಕೆಯಾಗಿದೆ ಎಂದು ಅಮೆರಿಕ ಅಟೊಮೊಬೈಲ್ ಅಸೋಸಿಯೇಷನ್ ಹೇಳಿದೆ.

ಆಹಾರ, ಅಡುಗೆ ಅನಿಲ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಇತರ ಚಿಲ್ಲರೆ ಮಾರಾಟ ವಸ್ತುಗಳ ಖರೀದಿಗೆ ಗ್ರಾಹಕರ ಬಳಿ ಹೆಚ್ಚಿನ ದುಡ್ಡು ಇರುವುದಿಲ್ಲ ಎಂದು ವೆಲ್ಸ್ ಫಾರ್ಗೊ ಸಂಸ್ಥೆಯ ಹಿರಿಯ ಅರ್ಥಶಾಸ್ತ್ರಜ್ಞ ಸ್ಯಾಮ್ ಬುಲರ್ಡ್ ಹೇಳಿದ್ದಾರೆ.

ಹೆಚ್ಚುತ್ತಿರುವ ದರವು ಗ್ರಾಹಕರ ಖರೀದಿ ಶಕ್ತಿಯನ್ನು ಕಡಿಮೆಮಾಡಿದರೂ, ವೇತನದಲ್ಲಿ ಹೆಚ್ಚಳವಾದರೆ ಹಣದುಬ್ಬರದ ಸಮಸ್ಯೆಯಿಂದ ಸ್ವಲ್ಪಮಟ್ಟಿನ ನಿರಾಳತೆ ದೊರಕಬಹುದು. ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ 2 ವರ್ಷದಲ್ಲೇ ಅತ್ಯಂತ ಕನಿಷ್ಟ ಪ್ರಮಾಣ 3.6%ಕ್ಕೆ ತಲುಪಿದ್ದು ಫೆಬ್ರವರಿ ಅಂತ್ಯದ ವೇಳೆ ಸುಮಾರು 11.3 ಮಿಲಿಯನ್ ಉದ್ಯೋಗಾವಕಾಶ ಪ್ರಕಟಿಸಲಾಗಿದೆ. ಅಲ್ಲದೆ ಉತ್ತಮ ಉದ್ಯೋಗ ಭದ್ರತೆಯ ಕಾರಣ ಕೆಲವು ಗ್ರಾಹಕರು ಹೆಚ್ಚು ಸಾಲ ಪಡೆಯುವ ಧೈರ್ಯ ತೋರುತ್ತಿದ್ದಾರೆ. ಇದು ಕೂಡಾ ಮಾರಾಟ ಕ್ಷೇತ್ರ ಚೇತರಿಸಿಕೊಳ್ಳಲು ಕಾರಣ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News