ಚೀನಾ ಸಂಬಂಧ ಉನ್ನತ ಮಟ್ಟಕ್ಕೆ ಏರಿಸಲು ಸಿದ್ಧ: ಪಾಕ್ ಪ್ರಧಾನಿ
Update: 2022-04-14 23:54 IST
ಇಸ್ಲಮಾಬಾದ್, ಎ.14: ಚೀನಾ-ಪಾಕಿಸ್ತಾನ ನಡುವಿನ ದ್ವಿಪಕ್ಷಿಯ ಸಂಬಂಧನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ದೇಶ ಸಿದ್ಧವಾಗಿದೆ. ಇದು ದೇಶದ 200 ಮಿಲಿಯನ್ ಜನತೆಯ ಆಶಯವೂ ಆಗಿದೆ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶಹಬಾರ್ ಶರೀಫ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಚೀನಾದ ರಾಯಭಾರಿ ಕಚೇರಿಯ ಮುಖ್ಯಸ್ಥ ಪ್ಯಾಂಗ್ ಚುನ್‌ಕ್ಸು ಇಸ್ಲಮಾಬಾದ್‌ನಲ್ಲಿನ ಪಾಕ್ ಪ್ರಧಾನಿಯ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಸಂದರ್ಭ ಮಾತನಾಡಿದ ಶರೀಫ್, ಉಭಯ ದೇಶಗಳ ಮಿತ್ರತ್ವ ಅನನ್ಯ, ಅಚಲ ಮತ್ತು ಎರಡೂ ದೇಶಗಳ ಜನರ ಹೃದಯದಲ್ಲಿ ಆಳವಾಗಿ ಬೇರೂರಿದೆ. ಪಾಕಿಸ್ತಾನಕ್ಕೆ ಆಂತರಿಕ, ಬಾಹ್ಯ ಸವಾಲು , ಪ್ರಮುಖ ಸಮಸ್ಯೆ ಎದುರಾದಾಗಲೆಲ್ಲಾ ಚೀನಾವು ನಮ್ಮೊಂದಿಗೆ ದೃಢವಾಗಿ ನಿಂತಿದೆ ಎಂದರು.
ಪಾಕಿಸ್ತಾನವು ಚೀನಾವನ್ನು ಅಚಲ ಸ್ನೇಹಿತ ಮತ್ತು ನಿಕಟ ಪಾಲುದಾರನೆಂದು ಪರಿಗಣಿಸಿದೆ ಎಂದು ಶರೀಫ್ ಹೇಳಿದ್ದಾರೆ.