ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದ 8 ಆರೋಪಿಗಳಿಗೆ ದಿಲ್ಲಿ ಬಿಜೆಪಿ ಕಚೇರಿಯಲ್ಲಿ ಹೂ ಹಾರ ಹಾಕಿ ಸನ್ಮಾನ!
ಹೊಸದಿಲ್ಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಂಟು ಆರೋಪಿಗಳನ್ನು ಗುರುವಾರ ದಿಲ್ಲಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಸನ್ಮಾನಿಸಿದರು.
ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸದಸ್ಯರಾಗಿರುವ ಎಂಟು ಮಂದಿಗೆ ಗುಪ್ತಾ ಅವರು ಹೂ ಹಾರ ಹಾಕಿ ಸತ್ಕರಿಸಿದರು.
“ಹಿಂದೂ ವಿರೋಧಿ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾದ ಬಿಜೆಪಿ ಯುವ ಮೋರ್ಚಾದ ಎಂಟು ಕಾರ್ಯಕರ್ತರು 14 ದಿನಗಳ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದರು.. ಇಂದು ರಾಜ್ಯ ಕಚೇರಿಯಲ್ಲಿ ಈ ಯುವ ಕ್ರಾಂತಿಕಾರಿಗಳನ್ನು ಸ್ವಾಗತಿಸುತ್ತಿದ್ದೇವೆ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಯಾವಾಗಲೂ ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಾರೆ ಎಂದು ಗುಪ್ತಾ ಟ್ವೀಟ್ ಮಾಡಿದ್ದಾರೆ.
ಎಎಪಿ ಶಾಸಕಿ ಅತಿಶಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶಾದ್ಯಂತದ ತನ್ನ ಕಾರ್ಯಕರ್ತರಿಗೆ "ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯ" ದಲ್ಲಿ ತೊಡಗಿಸಿಕೊಂಡರೆ ಅವರನ್ನು ಅಭಿನಂದಿಸಲಾಗುವುದು ಎಂಬ ಸಂದೇಶವನ್ನು ಬಿಜೆಪಿ ಕಳುಹಿಸಿದೆ ಎಂದು ಹೇಳಿದರು.
“ಬಿಜೆಪಿ ತನ್ನ ಪಕ್ಷದಲ್ಲಿ ಗೂಂಡಾಗಿರಿ ಮಾಡುವವರಿಗೆ ಆದ್ಯತೆ ನೀಡಿದರೆ , ಎಎಪಿ ವಿದ್ಯಾವಂತರಿಗೆ ಆದ್ಯತೆ ನೀಡುತ್ತದೆ. ಕೇಜ್ರಿವಾಲ್ ಜಿ ಅವರಂತಹ ನಮ್ಮ ನಾಯಕರು ಐಐಟಿಯಿಂದ ಬಂದವರು, ಸಿಸೋಡಿಯಾ ಜಿ ಹಿರಿಯ ಪತ್ರಕರ್ತರು , ರಾಘವ್ ಚಡ್ಡಾ ಅವರು ಸಿಎ ... ನಮ್ಮ ಪಂಜಾಬ್ ಶಾಸಕರಲ್ಲಿ 12 ವೈದ್ಯರು, ಏಳು ವಕೀಲರಿದ್ದಾರೆ. ಮತ್ತೊಂದೆಡೆ ಬಿಜೆಪಿ ಗೂಂಡಾಗಳ ಪಟ್ಟಿಯನ್ನು ಹೊಂದಿದೆ ”ಎಂದು ಶಾಸಕಿ ಅತಿಶಿ ಹೇಳಿದರು.