ಹಿಂದು ಯುವತಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಮನೆಗೆ ಬೆಂಕಿ ಹಚ್ಚಿದ ಉದ್ರಿಕ್ತ ಗುಂಪು

Update: 2022-04-16 18:04 GMT
Photo: ndtv

 ಆಗ್ರಾ(ಉ.ಪ್ರ.),ಎ.16: ಅಂತರ್ಧರ್ಮೀಯ ಪ್ರೇಮಸಂಬಂಧದ ಹಿನ್ನೆಲೆಯಲ್ಲಿ 22 ವರ್ಷದ ಯುವತಿಯೊಬ್ಬಳೊಂದಿಗೆ ಪರಾರಿಯಾಗಿದ್ದ ಯುವಕನ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಉದ್ರಿಕ್ತ ಗುಂಪೊಂದು ಶುಕ್ರವಾರ ಬೆಂಕಿ ಹಚ್ಚಿ ಸುಟ್ಟುಹಾಕಿದೆ.

 ‘ಧರ್ಮ ಜಾಗರಣ ಸಮನ್ವಯ ಸಂಘ’ ಎಂಬ ಗುಂಪಿನ ಕಾರ್ಯಕರ್ತರು ಆಗ್ರಾದ ರುನಾಕ್ತಾ ಪ್ರದೇಶದಲ್ಲಿ ಜಿಮ್ ಮಾಲಕ ಸಾಜಿದ್ ಎಂಬಾತನಿಗೆ ಸೇರಿದ ಮನೆಗೆ ಬೆಂಕಿ ಹಚ್ಚಿದ್ದಾರೆ. ಪಕ್ಕದಲ್ಲೇ ಇರುವ ಅದೇ ಕುಟುಂಬದ ಇನ್ನೊಂದು ಮನೆಯನ್ನು ಕೂಡಾ ಸುಟ್ಟುಹಾಕಲಾಗಿದೆ.

  ಯುವಕ ಸಾಜಿದ್ ಯುವತಿಯನ್ನು ಅಪಹರಿಸಿದ್ದಾನೆಂದು ಆರೋಪಿಸಿದ್ದ ಗುಂಪು ಆತನನ್ನು ಕೂಡಲೇ ಗುಂಪು ಆಗ್ರಹಿಸಿತ್ತು. ಆಸುಪಾಸಿನ ಪ್ರದೇಶದಲ್ಲಿರುವ ಅಂಗಡಿಗಳನ್ನು ಗುಂಪಿನ ಕಾರ್ಯಕರ್ತರು ಬಲವಂತವಾಗಿ ಮುಚ್ಚಿದ್ದರು. ಜಿಮ್ ಮಾಲಕನ ಮನೆಯ ಮೇಲೆ ನಡೆದ ದಾಳಿಯಲ್ಲಿ ಯಾರಾದರೂ ಗಾಯಗೊಂಡಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.

 ಯುವತಿಯು ಸೋಮವಾರ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬಿಕರು ದೂರು ನೀಡಿದ ಬಳಿಕ ಪೊಲೀಸರು ಶೋಧಕಾರ್ಯಾಚರಣೆ ಆರಂಭಿಸಿದ್ದರು. ಎರಡು ದಿನಗಳ ಬಳಿಕ ಪೊಲೀಸರು ಆಕೆಯನ್ನು ಪತ್ತೆಹಚ್ಚಿದ್ದರು. ಆದರೆ ಸಾಜಿದ್ ಎಲ್ಲಿದ್ದಾನೆಂಬುದು ಇನ್ನೂ ತಿಳಿದುಬಂದಿಲ್ಲ.

  ತಾನು ಪ್ರಾಪ್ತವಯಸ್ಕಳಾಗಿದ್ದು, ಸ್ವಂತ ಇಚ್ಚೆಯೊಂದಿಗೆ ಯುವಕನೊಂದಿಗೆ ತೆರಳಿದ್ದಾಗಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಆಗ್ರಾದ ಹಿರಿಯ ಪೊಲೀಸ್ ಅಧೀಕ್ಷಕ ಸುಧೀರ್‌ ಸಿಂಗ್ ಕೂಡಾ ಯುವಕ-ಯುವತಿ ಇಬ್ಬರೂ ವಯಸ್ಕರೆಂಬುದನ್ನು ದೃಢಪಡಿಸಿದ್ದಾರೆ. ಯುವತಿಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.

  ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷದ ಆರೋಪದಲ್ಲಿ ಪೊಲೀಸ್ ಚೌಕಿಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ. ಸಿಕಂದ್ರಾ ಪೊಲೀಸ್ ಠಾಣಾಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಪೊಲೀಸ್ ಠಾಣಾಧಿಕಾರಿಯೂ ತಪ್ಪಿತಸ್ಥರೆಂದು ದೃಢಪಟ್ಟಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸುಧೀರ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


ಮನೆಗಳಿಗೆ ಬೆಂಕಿ ಹಚ್ಚಿ ಗುಂಪಿನ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಅವರನ್ನು ಕೂಡಲೇ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಕುಟುಂಬಿಕರು ಕೂಡಾ ಜಿಮ್ ಮಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News