ಆಕಾರ್ ಪಟೇಲ್ ವಿರುದ್ಧದ ಲುಕ್‌ಔಟ್ ನೋಟಿಸ್ ಹಿಂಪಡೆಯಲು ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ದಿಲ್ಲಿ ಕೋರ್ಟ್
ಹೊಸದಿಲ್ಲಿ: ಆಮ್ನೆಸ್ಟಿ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧದ ಲುಕ್‌ಔಟ್ ನೋಟಿಸನ್ನು ಹಿಂತೆಗೆದುಕೊಳ್ಳುವಂತೆ ಸಿಬಿಐಗೆ ನಿರ್ದೇಶನ ನೀಡುವ ಹಿಂದಿನ ಆದೇಶವನ್ನು ದೆಹಲಿ ನ್ಯಾಯಾಲಯವು ಶನಿವಾರ ಎತ್ತಿಹಿಡಿದಿದೆ.
ಆದಾಗ್ಯೂ, ವಿಶೇಷ ಸಿಬಿಐ ನ್ಯಾಯಾಧೀಶ ಸಂತೋಷ್ ಸ್ನೇಹಿ ಮಾನ್ ಅವರು, ಸಿಬಿಐ ನಿರ್ದೇಶಕ ಆಕರ್ ಪಟೇಲ್ ಅವರಿಗೆ ಲಿಖಿತವಾಗಿ ಕ್ಷಮೆಯಾಚಿಸಬೇಕೆಂದು ಮ್ಯಾಜಿಸ್ಟ್ರೇಟ್ ನೀಡಿದ್ದ ನಿರ್ದೇಶನವನ್ನು ತಿರಸ್ಕರಿಸಿದ್ದಾರೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯ ಮೇಲೆ ಸಿಬಿಐ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ. ಪಟೇಲ್ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಅನ್ನು ಎಸಿಎಂಎಂ ಇತ್ತೀಚೆಗೆ ರದ್ದುಗೊಳಿಸಿತ್ತು.
ಆಮ್ನೆಸ್ಟಿ ಇಂಡಿಯಾ ಮತ್ತು ಅದರ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ವಿರುದ್ಧ 2010 ರ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆರೋಪಿಸಿ ಸಿಬಿಐ ಕಳೆದ ಡಿಸೆಂಬರ್‌ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಸಿಬಿಐ ತನ್ನ ವಿರುದ್ಧ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ (ಎಲ್‌ಒಸಿ) ವಿರುದ್ಧ ಆಕಾರ್ ಪಟೇಲ್ ಇತ್ತೀಚೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯವು ಲುಕ್‌ಔಟ್ ನೋಟಿಸ್ ಹಿಂಪಡೆಯಲು ಸಿಬಿಐಗೆ ಆದೇಶಿಸಿತ್ತು. ಆದರೆ, ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು. ಇದೀಗ, ದೆಹಲಿ ನ್ಯಾಯಾಲಯವು ಲುಕೌಟ್ ನೋಟಿಸ್ ಹಿಂಪಡೆಯಲು ನಿರ್ದೇಶಿಸಿದ್ದ ತನ್ನ ಹಿಂದಿನ ಆದೇಶವನ್ನು ಎತ್ತಿ ಹಿಡಿದಿದೆ.