×
Ad

ಪಾಕ್: ಅಸೆಂಬ್ಲಿ ಸ್ಪೀಕರ್ ಆಗಿ ಪರ್ವೇಝ್ ಅಶ್ರಫ್ ಆಯ್ಕೆ

Update: 2022-04-16 22:58 IST

ಇಸ್ಲಮಾಬಾದ್, ಎ.16: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ನೂತನ ಸ್ಪೀಕರ್ ಆಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಮಾಜಿ ಮುಖಂಡ ಮತ್ತು ಮಾಜಿ ಪ್ರಧಾನಿ ಪರ್ವೇಝ್ ಅಶ್ರಫ್ ಶನಿವಾರ ಆಯ್ಕೆಯಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  ಈ ಹಿಂದಿನ ಸ್ಪೀಕರ್ ಅಸಾದ್ ಖೈಸರ್ ಎಪ್ರಿಲ್ 3ರಂದು ಇಮ್ರಾನ್‌ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನ ಪದತ್ಯಾಗ ಮಾಡಿದ್ದರು. ಶನಿವಾರದ ಮತ್ತೊಂದು ಬೆಳವಣಿಗೆಯಲ್ಲಿ, ಸಂಸತ್ತಿನ ಉಪಸ್ಪೀಕರ್, ಈಗ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಖಾಸಿಮ್ ಸುರಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅರ್ಧಗಂಟೆಗೂ ಮುನ್ನ ಸುರಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಇಮ್ರಾನ್‌ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಕಲಾಪವನ್ನು ನಡೆಸಿಕೊಡಬೇಕಿದ್ದ ಸುರಿ, ಹಠಾತ್ತಾಗಿ ಸದನದ ನೇತೃತ್ವವನ್ನು ಸಾದಿಖ್ ಗೆ ನೀಡಿ ಸದನದಿಂದ ನಿರ್ಗಮಿಸಿದ್ದರು. ಅವಿಶ್ವಾಸ ನಿರ್ಣಯ ಮಂಡನೆಯಾಗಿ ಇಮ್ರಾನ್‌ ಖಾನ್ ಪದಚ್ಯುತಗೊಂಡು ಶಹಬಾಝ್ ನೂತನ ಪ್ರಧಾನಿಯಾಗಿ ಆಯ್ಕೆಗೊಂಡ ಬಳಿಕ ಏಕಾಏಕಿ ಸದನಕ್ಕೆ ಆಗಮಿಸಿ ಸ್ಪೀಕರ್ ಪೀಠದಲ್ಲಿ ಕುಳಿತ ಸುರಿ, ಸದನದ ಕಲಾಪವನ್ನು ಎಪ್ರಿಲ್ 16ಕ್ಕೆ ಮುಂದೂಡುವುದಾಗಿ ಘೋಷಿಸಿದ್ದರು. ಸುರಿಯನ್ನು ಪದಚ್ಯುತಗೊಳಿಸಲು ಆಡಳಿತಾರೂಢ ಮೈತ್ರಿಕೂಟ ನಿರ್ಧರಿಸಿತ್ತು. ಆದರೆ ಸುರಿ ಅದಕ್ಕೂ ಮುನ್ನ ತಾವೇ ರಾಜೀನಾಮೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ರಾಜೀನಾಮೆ ಪತ್ರದ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸುರಿ, ತನ್ನ ಪಕ್ಷವಾದ ಪಿಟಿಐಯ ನಿಲುವಿಗೆ ಅನುಸಾರವಾಗಿ ಈ ರಾಜೀನಾಮೆ ನೀಡುತ್ತಿದ್ದೇನೆ. ಪಾಕಿಸ್ತಾನದ ಸಾರ್ವಭೌಮತೆ ಮತ್ತು ಸಮಗ್ರತೆಯ ವಿಷಯದಲ್ಲಿ ನಾವೆಂದೂ ರಾಜಿ ಮಾಡಿಕೊಳ್ಳುವುದಿಲ್ಲ. ದೇಶದ ಹಿತಾಸಕ್ತಿ ಮತ್ತು ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಪಾಕಿಸ್ತಾನದ ರಕ್ಷಣೆಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News