ಇರಾಕ್: ಬಸ್ಸುಗಳ ಮುಖಾಮುಖಿ ಡಿಕ್ಕಿ; 9 ಶಿಕ್ಷಕರ ಸಹಿತ 11 ಮಂದಿ ಮೃತ್ಯು‌

Update: 2022-04-16 17:29 GMT

 ಬಗ್ದಾದ್, ಎ.16: ಇರಾಕ್ ನ ರಾಜಧಾನಿ ಬಗ್ದಾದ್ ನ ದಕ್ಷಿಣದಲ್ಲಿನ ಬಬಿಲೋನ್ ಪ್ರಾಂತದಲ್ಲಿ ಶುಕ್ರವಾರ ರಾತ್ರಿ ವೇಳೆ 2 ಬಸ್ಸುಗಳ ಮುಖಾಮುಖಿ ಡಿಕ್ಕಿಯಲ್ಲಿ 9 ಶಿಕ್ಷಕರ ಸಹಿತ 11 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

  ರಮಝಾನ್ ಉಪಾಹಾರದಲ್ಲಿ ಪಾಲ್ಗೊಂಡಿದ್ದ ತಂಡ ಕರ್ಬಲಾದಿಂದ ಮಿನಿ ಬಸ್ಸು ಮೂಲಕ ಹಿಂದಿರುಗುತ್ತಿದ್ದಾಗ ಬಬಿಲೋನ್ ಪ್ರಾಂತದ ಬಳಿ ಹೆದ್ದಾರಿಯಲ್ಲಿ ಮತ್ತೊಂದು ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಎರಡೂ ವಾಹನಗಳು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದರಿಂದ ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳಿಗೆ ಬೆಂಕಿ ತಗುಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಂತರಿಕ ಸಂಘರ್ಷ, ಕೊರೋನ ಸಾಂಕ್ರಾಮಿಕದಿಂದ ಅರ್ಥವ್ಯವಸ್ಥೆ ಕುಸಿದಿರುವ ಇರಾಕಿನಲ್ಲಿ ಮೂಲಸೌಕರ್ಯ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ಬೃಹದಾಕಾರದ ಹೊಂಡಗಳು ಉಂಟಾಗಿರುವುದರಿಂದ ರಸ್ತೆ ಅಪಘಾತ ಪ್ರಕರಣ ಹೆಚ್ಚಿದೆ. ಕಳೆದ ವರ್ಷ ಇರಾಕ್ ನಲ್ಲಿ ರಸ್ತೆ ಅಪಘಾತದಲ್ಲಿ ಸುಮಾರು 1 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News