ಬ್ರಿಟನ್ ಪ್ರಧಾನಿ ಸಹಿತ ಹಲವು ಅಧಿಕಾರಿಗಳಿಗೆ ಪ್ರವೇಶ ನಿಷೇಧಿಸಿದ ರಶ್ಯ

Update: 2022-04-16 17:32 GMT

ಮಾಸ್ಕೊ, ಎ.16: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇತರ ಹಲವು ಉನ್ನತ ಅಧಿಕಾರಿಗಳು ರಶ್ಯ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ರಶ್ಯದ ವಿದೇಶಾಂಗ ವ್ಯವಹಾರ ಇಲಾಖೆ ಶನಿವಾರ ಘೋಷಿಸಿದೆ.

ಬ್ರಿಟನ್ ಉಪಪ್ರಧಾನಿ ಡೊಮಿನಿಕ್ ರ್ಯಾಬ್, ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಮಾಜಿ ಪ್ರಧಾನಿ ಥೆರೆಸಾ ಮೇ ಮತ್ತು ಸ್ಕಾಟ್‌ಲ್ಯಾಂಡ್‌ನ ಪ್ರಥಮ ಸಚಿವ ನಿಕೊಲಾ ಸ್ಟರ್ಗನ್ ನಿಷೇಧಿತರ ಪಟ್ಟಿಯಲ್ಲಿದ್ದಾರೆ.

ಬ್ರಿಟನ್ ಆಡಳಿತದ ಕಡಿವಾಣವಿಲ್ಲದ ಹೇಳಿಕೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಶ್ಯವನ್ನು ಒಬ್ಬಂಟಿಯನ್ನಾಗಿಸುವ ಉದ್ದೇಶದ ಅಭಿಯಾನ ಮತ್ತು ನಮ್ಮ ದೇಶವನ್ನು ನಿರ್ಬಂಧಿಸುವ ಮತ್ತು ದೇಶೀಯ ಆರ್ಥಿಕತೆಯ ಕತ್ತು ಹಿಸುಕುವ ಪ್ರಯತ್ನಕ್ಕೆ ಪ್ರತಿಯಾಗಿ ನಾವು ಈ ಕ್ರಮ ಕೈಗೊಂಡಿದ್ದೇವೆ. ರಶ್ಯದ ಉನ್ನತ ಅಧಿಕಾರಿಗಳ ವಿರುದ್ಧ ನಿರ್ಬಂಧ ಜಾರಿ ಸಹಿತ ಬ್ರಿಟನ್ ಸರಕಾರ ಹಲವು ಪ್ರತಿಕೂಲ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವಾಲಯ ಆರೋಪಿಸಿದೆ.

ಉಕ್ರೇನ್ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಉದ್ದೇಶಪೂರ್ವಕವಾಗಿ ಉತ್ಪ್ರೇಕ್ಷೆಯ ಹೇಳಿಕೆ ನೀಡುವುದು, ಉಕ್ರೇನ್ ಆಡಳಿತಕ್ಕೆ ಆಕ್ರಮಣಕಾರಿ ಶಸ್ತ್ರಾಸ್ತ್ರ ಪೂರೈಸುವುದು ಮತ್ತು ನ್ಯಾಟೊ ಕೈಗೊಳ್ಳುವ ಇದೇ ರೀತಿಯ ಪ್ರಯತ್ನಗಳನ್ನು ಸಂಯೋಜಿಸುವ ಕಾರ್ಯವನ್ನು ಬ್ರಿಟನ್ ನಾಯಕತ್ವ ಮಾಡುತ್ತಿದೆ ಎಂದು ಹೇಳಿಕೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News