ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಪೊಲೀಸ್ ತನಿಖೆಯ ಮುಂದಿರುವ ಸವಾಲು ಮತ್ತು ಪ್ರಶ್ನೆಗಳು!

Update: 2022-04-16 17:45 GMT
ಸಂತೋಷ್ ಪಾಟೀಲ್

ಉಡುಪಿ : ಕೆ.ಎಸ್.ಈಶ್ವರಪ್ಪನವರೇ ನನ್ನ ಸಾವಿಗೆ ಕಾರಣ ಎಂದು ವಾಟ್ಸಾಪ್ ಡೆತ್‌ನೋಟು ಕಳುಹಿಸಿ ಉಡುಪಿಯ ಲಾಡ್ಜ್‌ನಲ್ಲಿ ಎ.12ರಂದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣ ಪೊಲೀಸರಿಗೆ ಸಾಕಷ್ಟು ಸವಾಲುಗಳನ್ನು ಎದುರಿಗೆ ತಂದಿರಿಸಿದ್ದು, ಇದರಲ್ಲಿ ಹಲವು ವಿಚಾರಗಳು ಇನ್ನು ಕೂಡ ಪ್ರಶ್ನೆಯಾಗಿಯೇ ಉಳಿದಿವೆ.

ಉಡುಪಿಯ ಲಾಡ್ಜ್‌ನಲ್ಲಿ ಎ.12ರಂದು ಬೆಳಗ್ಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕುಟುಂಬಸ್ಥರು ಎ.12ರಂದು ರಾತ್ರಿ 11ಗಂಟೆಗೆ ಉಡುಪಿಗೆ ಆಗಮಿಸಿ, ಎ.13ರಂದು ನಸುಕಿನ ವೇಳೆ ಅನುಮಾನಾಸ್ಪದ ದೂರನ್ನು ಉಡುಪಿ ನಗರ ಠಾಣೆಯಲ್ಲಿ ದಾಖಲಿಸಿದ್ದರು. ಆದುದರಿಂದ ಪೊಲೀಸರು ಈ ಪ್ರಕರಣವನ್ನು ಕೇವಲ ಆತ್ಮಹತ್ಯೆಯಾಗಿ ಮಾತ್ರವಲ್ಲದೆ ಬೇರೆ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಆದರೆ ಇದರಲ್ಲೂ ಪೊಲೀಸರಿಗೆ ಸಾಕಷ್ಟು ಪ್ರಶ್ನೆಗಳು ಕಾಡುತ್ತಿವೆ.

ಗೆಳೆಯ ರಾಜೇಶ್ ಯಾರು?

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದ ಎ.12ರಂದು ಸಂಜೆ ವೇಳೆ ಆರಂಭದಲ್ಲಿ ಪ್ರಶಾಂತ್ ಶೆಟ್ಟಿ ನೀಡಿದ ದೂರಿನಂತೆ ಅಸ್ವಾಭಾವಿಕ ಮರಣ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ದೂರಿನಲ್ಲಿ ತಿಳಿಸಿದಂತೆ ಸಂತೋಷ್ ಪಾಟೀಲ್, ಪ್ರಶಾಂತ್ ಶೆಟ್ಟಿ, ಸಂತೋಷ್ ಮೇದಪ್ಪ ಎಂಬವರು ಎ.7ರಂದು ಧಾರಾವಾಡದಿಂದ ಕಾರಿನಲ್ಲಿ ಪ್ರವಾಸ ಹೊರಟು ಚಿಕ್ಕಮಗಳೂರು ತಲುಪಿ ಎ.8ರಿಂದ 11ರವರೆಗೆ ಹೋಂ ಸ್ಟೇಯೊಂದರಲ್ಲಿ ತಂಗಿದ್ದರು. ನಂತರ ಅಲ್ಲಿಂದ ಹೊರಟು ಸಂಜೆ ಉಡುಪಿ ತಲುಪಿ ಲಾಡ್ಜ್‌ನಲ್ಲಿ ಎರಡು ರೂಮ್ ಬುಕ್ ಮಾಡಿದ್ದರು.

ಒಂದು ರೂಮ್‌ನಲ್ಲಿ ಪ್ರಶಾಂತ್ ಶೆಟ್ಟಿ ಮತ್ತು ಸಂತೋಷ್ ಮೇದಪ್ಪರನ್ನು ಉಳಿದುಕೊಳ್ಳುವಂತೆ ಸಂತೋಷ್ ಪಾಟೀಲ್ ತಿಳಿಸಿದ್ದರು. ಇನ್ನೊಂದು ರೂಮಿ ನಲ್ಲಿ ತಾನು ಉಳಕೊಳ್ಳುವುದಾಗಿಯೂ ಹೇಳಿದ ಸಂತೋಷ್ ಪಾಟೀಲ್, ನನ್ನ ರೂಮಿಗೆ ಗೆಳೆಯ ರಾಜೇಶ್ ಬರುತ್ತಿರುವುದಾಗಿಯೂ ತಿಳಿಸಿದ್ದರು. ಹಾಗೆ ಸಂತೋಷ್ ಪಾಟೀಲ್ ಒಬ್ಬನೇ ರೂಮಿನಲ್ಲಿ ಉಳಿದುಕೊಂಡಿದ್ದರು. ಇದೀಗ ಈ ರಾಜೇಶ್ ಯಾರು ಎಂಬುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೂಮಿನಲ್ಲಿ ಒಬ್ಬನೇ ಉಳಿದುಕೊಳ್ಳಲು ರಾಜೇಶ್ ಎಂಬ ಗೆಳೆಯನ ಹೆಸರನ್ನು ಸೃಷ್ಠಿಸಿರುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ. ಆದರೂ ಪೊಲೀಸರು ಸಂತೋಷ್ ಪಾಟೀಲ್‌ನ ಗೆಳೆಯರ ಮೂಲಕ ಈ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಈವರೆಗೆ ಈ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲ ಗಳು ಸ್ಪಷ್ಟಪಡಿಸಿವೆ.

ಕೀಟನಾಶಕ ಸೇವಿಸಿ ಆತ್ಮಹತ್ಯೆ!

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲು ಮೋನೊಸಿಲ್ ಕಂಪೆನಿಯ ಮೊನೋಕ್ರೊಟೋಫೋಸ್ ಎಂಬ ವಿಷವನ್ನು ಬಳಸಿರುವುದು ದೃಢಪಟ್ಟಿದೆ. ಅದನ್ನು ಜ್ಯೂಸ್‌ನಲ್ಲಿ ಬೆರೆಸಿ ಅವರು ಸೇವಿಸಿದ್ದರು.

ಗುಜರಾತ್, ರಾಜಸ್ತಾನದಲ್ಲಿ ಉತ್ಪಾದನೆಯಾಗುವ ಈ ವಿಷಕಾರಿ ರಾಸಾಯನಿಕವನ್ನು ಕೃಷಿಗೆ ಬಳಸಲಾಗುತ್ತಿದೆ. ಬೆಳಗಾವಿಯ ಹೆಚ್ಚಿನ ರೈತರ ಮನೆಗಳಲ್ಲಿ ಈ ರಾಸಾಯನಿಕ ಇರುತ್ತದೆ. ಹಾಗಾಗಿ ಈ ವಿಷವು ಬೆಳಗಾವಿಯಲ್ಲಿ ಸುಲಭವಾಗಿ ದೊರೆಯುತ್ತದೆ. ಸಂತೋಷ್ ಪಾಟೀಲ್ ಬೆಳಗಾವಿಯಲ್ಲೇ ಖರೀದಿಸಿ ತಂದಿರುವ ಸಾಧ್ಯತೆ ಕೂಡ ಇದೆ.

ಆದರೆ ಆತನ ಗೆಳೆಯರಿಗೆ ಸಂತೋಷ್ ಪಾಟೀಲ್ ಎಲ್ಲಿ ಈ ವಿಷ ಖರೀದಿಸಿ ತಂದಿದ್ದರು ಎಂಬುದು ಗೊತ್ತಿಲ್ಲ. ಗೂಗಲ್ ಪೇ ಮೂಲಕ ಹಣ ನೀಡಿ ಖರೀದಿಸಿದ್ದರೆ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಆದರೆ ಕ್ಯಾಶ್ ನೀಡಿ ತಂದಿದ್ದರೆ ಎಲ್ಲಿಂದ ಖರೀದಿಸಲಾಗಿತ್ತು ಎಂದು ಹುಡುಕಲು ಸಾಧ್ಯವಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಹಾಗಾಗಿ ಈ ವಿಷಯ ಕೂಡ ಪೊಲೀಸರಿಗೆ ಪ್ರಶ್ನೆಯಾಗಿಯೇ ಉಳಿದಿದೆ.

ಬಟ್ಟೆಗಳು ರೂಮಿನಲ್ಲಿಯೇ ಇದೆ!

ಸಂತೋಷ್ ಪಾಟೀಲ್ ಪ್ರವಾಸ ಹೊರಡುವ ವೇಳೆ ಎರಡು ಬ್ಯಾಗ್‌ನಲ್ಲಿ ತಂದಿದ್ದ ಬಟ್ಟೆಬರೆಗಳನ್ನು ಕುಟುಂಬಸ್ಥರು ಮನೆಗೆ ತೆಗೆದುಕೊಂಡು ಹೋಗದೆ ರೂಮಿನಲ್ಲಿಯೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಮೃತ ಸಂತೋಷ್ ಪಾಟೀಲ್‌ರ ಬಟ್ಟೆ ಬರೆಗಳನ್ನು ಅವರೇ ತಂದಿದ್ದ ಎರಡು ಬ್ಯಾಗ್ ಗಳಲ್ಲಿ ತುಂಬಿಸಿ ಇಡಲಾಗಿತ್ತು. ಆದರೆ ಕುಟುಂಬಸ್ಥರು, ಆತನ ನೆನಪು ಕಾಡುತ್ತದೆ ಎಂಬ ಕಾರಣಕ್ಕೆ ಅದನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ್ದರೆನ್ನಲಾಗಿದೆ. ಹಾಗಾಗಿ ಎ.15ರವರೆಗೆ ಆ ಬ್ಯಾಗ್‌ಗಳು ಕೋಣೆಯಲ್ಲಿಯೇ ಇರುವುದು ಕಂಡು ಬಂದಿದೆ.

ಗೆಳೆಯರಿಬ್ಬರು ಪೊಲೀಸ್ ವಶದಲ್ಲಿ!

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಬೆಳಗಾವಿ, ಚಿಕ್ಕಮಗಳೂರು, ಧಾರವಾಡ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ತೆರಳಿ ಮಾಹಿತಿ ಕಲೆ ಹಾಕುವ ಕಾರ್ಯ ಮಾಡುತ್ತಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವಾಗ ಅವರ ಜೊತೆಗೆ ಇದ್ದ ಇಬ್ಬರು ಗೆಳೆಯರು ತನಿಖೆಯ ಉದ್ದೇಶದಿಂದ ಈಗಲೂ ಪೊಲೀಸರ ವಶದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ. ಇವರು ಹೇಳಿಕೆಯಲ್ಲಿ ತಿಳಿಸಿರುವ ಮಾಹಿತಿಗಳು ಸತ್ಯವೇ ಎಂಬುದು ಪರಿಶೀಲಿಸಲು ಹೋದ ಸ್ಥಳಗಳಿಗೆಲ್ಲ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ದೃಢಪಡಿಸುತ್ತಿದ್ದಾರೆ. ಅದೇ ರೀತಿ ಸಾಕ್ಷ್ಯ ಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News